
ಪ್ರಗತಿವಾಹಿನಿ ಸುದ್ದಿ; ಕೋಲಾರ: ಆರೋಗ್ಯ ಇಲಾಖೆಯಲ್ಲಿ 3 ಸಾವಿರ ಕೋಟಿ ಹಗರಣ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಮೂರು ವರ್ಷದ ಖರ್ಚು ವೆಚ್ಚ ಎಲ್ಲವನ್ನೂ ನೀಡುತ್ತೇನೆ. ಹಗರಣ ಮಾಡಿದ್ದರೆ ಪಬ್ಲಿಕ್ ನಲ್ಲಿ ನನಗೆ ನೇಣು ಹಾಕಲಿ ಎಂದು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಆರೋಪಕ್ಕೆ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಮೂರು ವರ್ಷ ಏನೇನು ಖರ್ಚಾಯ್ತು? ವರ್ಷವಾರು ಫೈಲ್ ಟು ಫೈಲ್ ಲೆಕ್ಕ ಕೊಡುತ್ತೇವೆ. ಯಾವ ತನಿಖೆ ಬೇಕಾದ್ರೂ ಮಾಡಲಿ. ಅದರಲ್ಲಿ ಏನಾದ್ರೂ ಹಗರಣ ಆಗಿದ್ದರೆ ಸಾರ್ವಜನಿಕವಾಗಿ ನನ್ನನ್ನು ನೇಣಿಗೆ ಹಾಕಲಿ ಎಂದರು.
ಹಣಕ್ಕಾಗಿ ಬಿಜೆಪಿ ಸೇರಿದರು ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿದ ಸಚಿವರು, ಸಿದರಾಮಯ್ಯ ಏನಾದ್ರೂ ಹೇಳಲಿ. ಅವರಿಗೂ ಗೊತ್ತಿದೆ. ನಾವು ಹಣಕ್ಕಾಗಿ ಬಿಜೆಪಿಗೆ ಹೋಗಿಲ್ಲ ಎಂಬುದು. ಜೆಡಿಎಸ್ -ಕಾಂಗ್ರೆಸ್ ದುರಾಡಳಿತಕ್ಕೆ, ಜೆಡಿಎಸ್ ಜೊತೆ ಅನೈತಿಕ ಸಬಂಧಕ್ಕೆ ಬೇಸತ್ತು, ನೊಂದು ಕಾಂಗ್ರೆಸ್ ನಿಂದ ಹೊರ ಬಂದು ಬಿಜೆಪಿಗೆ ಸೇರಿದ್ದೇವೆ. ರಾಜಕೀಯಕ್ಕಾಗಿ ಸಿದ್ದರಾಮಯ್ಯ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಾವು ಮಾಜಿ ಸಿಎಂ ಸಿದ್ದರಾಮಯ್ಯ ಅವರಷ್ಟು ಬುದ್ಧಿವಂತರಲ್ಲದಿರಬಹುದು. ಆದರೆ ಅಷ್ಟೋಇಷ್ಟೋ ವಿದ್ಯಾವಂತರಾಗಿದ್ದೇವೆ. ಇಡೀ ಜೀವನ ಕಾಂಗ್ರೆಸ್ ಪಕ್ಷದವರಿಗೆ ಬೈದುಕೊಂಡು ಬಂದರು. ಈ ಹಿಂದೆ ಜೆಡಿಎಸ್ ನಲ್ಲಿದ್ದ ಸಿದ್ದರಾಮಯ್ಯ ಯಾಕೆ ಕಾಂಗ್ರೆಸ್ ಪಕ್ಷ ಸೇರಿದರು? ಎಂದು ಪ್ರಶ್ನಿಸಿದರು.
ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಅವರನ್ನು ಸೋಲಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಒಳ್ಳೆಯ ಬ್ಯಾಟ್ಸ್ ಮನ್. ಕ್ರಿಕೆಟ್ ನಲ್ಲಿ ಬ್ಯಾಟ್ಸಮನ್ ಯಾರು? ಬೌಲರ್ ಯಾರು? ಅಂತ ನೋಡಲ್ಲ. ಚೆಂಡಿನ ಗುಣಮಟ್ಟ ನೋಡಿ ಹೊಡೆಯುತ್ತಾರೆ. ಹೇಗೆ ಬೌಲಿಂಗ್ ಎದುರಿಸಬೇಕು ಎಂಬುದು ನನಗೆ ಗೊತ್ತಿದೆ. ನಾನೇನು ಸಣ್ಣ ಮಗುವಲ್ಲ. ಮೂರು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ನನ್ನ ಕ್ಷೇತ್ರದ ಜನರ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದರು.
*ಆರೋಗ್ಯ ಇಲಾಖೆಯಲ್ಲಿ 3000 ಕೋಟಿ ಹಗರಣ; ಸಚಿವ ಸುಧಾಕರ್ ವಿರುದ್ಧ ಗಂಭೀರ ಆರೋಪ*
https://pragati.taskdun.com/siddaramaiahdr-sudhakarbjp-govt/