ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ ಮಾಫಿಯಾ ಇಂದು ನಿನ್ನೆಯದಲ್ಲ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬೇರು ಸಮೇತ ಕಿತ್ತುಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ತನಿಖಾ ತಂಡದ ಮೇಲೆ ಒತ್ತಡ ತರುವಂತಹ ಹಾಗೂ ವಿಷಯಾಂತರ ಮಾಡುವ ಯತ್ನ ನಡೆಯುತ್ತಿದೆ. ಆದರೆ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದರು.
ಡ್ರಗ್ ಮಾಫಿಯಾ ಸಂಬಂಧ 84ಕ್ಕೂ ಹೆಚ್ಚು ಜನರನ್ನ ವಿಚಾರಣೆ ಮಾಡಲಾಗುತ್ತಿದೆ. ಈಗಾಗಲೇ ಗೃಹ ಸಚಿವರು ಈ ಕುರಿತು ಮಾತನಾಡಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ. ಮಾಫಿಯಾದಲ್ಲಿ ಯಾರೇ ಇದ್ದರೂ ಕಠಿಣ ಕ್ರಮಕೈಗೊಳ್ಳುತ್ತೇವೆ. ಯುವ ಜನರನ್ನು ಪಿಡುಗಿನಿಂದ ಮುಕ್ತಗೊಳಿಸಬೇಕೆಂಬ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.
ಡ್ರಗ್ಸ್ ಮಾಫಿಯಾ ರಾಜ್ಯಕ್ಕೆ ಸೀಮಿತವಾಗಿಲ್ಲ, ಹೊರರಾಜ್ಯ, ಹೊರದೇಶಗಳ ಸಂಪರ್ಕ ಕೂಡ ಇದೆ. ಕೆಲವು ಕಡೆ ಮಾಫಿಯಾ ಭಯೋತ್ಪಾದಕರ ಜೊತೆ ತಳುಕು ಹಾಕಿಕೊಂಡಿದೆ. ಮತ್ತೆ ಕೆಲವು ಕಡೆ ರಾಜಕಾರಣಿಗಳು ಹಾಗೂ ಸಿನಿಮಾ ಸೆಲೆಬ್ರಿಟಿಗಳ ಜೊತೆಯೂ ತಳುಕು ಹಾಕಿಕೊಂಡಿದೆ. ಮಾಫಿಯಾದಲ್ಲಿ ಯಾರೇ ಇದ್ದರೂ ಅವರ ವಿರುದ್ಧ ಕ್ರಮಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ