*ಮಗನ ಹಲ್ಲೆ ಪ್ರಕರಣ: ಮೈ ಮೇಲೆ ಪ್ರಜ್ಞೆ ಇರ್ಬೇಕು; ತಪ್ಪು ಮಾಡಿದ್ಮೇಲೆ ಎಲ್ಲರೂ ಒಂದೇ ಎಂದ ನಟ ದುನಿಯಾ ವಿಜಯ್*

ಪ್ರಗತಿವಾಹಿನಿ ಸುದ್ದಿ: ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ನಿಂದ ಸಹಪಾಠಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದುನಿಯಾ ವಿಜಯ್, ಮಗನಾಗಿರಲಿ ಯಾರೇ ಆಗಿರಲಿ, ತಪ್ಪು ಮಾಡಿದ್ಮೇಲೆ ಎಲ್ಲರೂ ಒಂದೇ. ಯಾರೂ ಕ್ಷಮಿಸಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದುನಿಯಾ ವಿಜಯ್, ಮಗನೇ ಆದ್ರೂ ತಪ್ಪು ಮಾಡಿದ್ರೆ ತಪ್ಪೇ. ಕಾನೂನು ಅದನ್ನ ನೋಡಿಕೊಳ್ಳುತ್ತದೆ. ನಾನು ಮಗನ ಜೊತೆ ಮಾತನಾಡಿ ಬುದ್ಧಿಹೇಳಿದ್ದೇನೆ. ಮೈಮೇಲೆ ಪ್ರಜ್ಞೆ ಇರ್ಬೇಕು. ಜವಾಬ್ದಾರಿ ಇರ್ಬೇಕು ಎಂದು ಹೇಳಿದರು.
ಮಕ್ಕಳು ಅಂದಾಗ ಜಗಳ ಇರುತ್ತೆ. ಆ ವಯಸ್ಸಿನಲ್ಲಿ ಸ್ನೇಹಿತರ ನಡುವೆ ಏನೋ ಜಗಳವಾಗಿ ಹೀಗೆ ಮಾಡಿಕೊಂಡಿದ್ದಾರೆ. ಎಲ್ಲರ ಜೀವನದಲ್ಲೂ ಇದೆಲ್ಲ ಇದ್ದೇ ಇರುತ್ತೆ. ಆದರೆ ಸಾಮಾಜಿಕ ಜವಾಬ್ದಾರಿ ಮುಖ್ಯ, ಮುಂದೆ ಇಂತಹ ಘಟನೆಗಳು ಆಗಬಾರದು. ನಾನು ಒಬ್ಬ ತಂದೆಯಾಗಿ ಮಗನಿಗೆ ಬುದ್ಧಿ ಹೇಳಿದ್ದೇನೆ ಎಂದರು.
ಈ ವೇಳೆ ಫ್ಯಾಮಿಲಿ ವಿಚಾರದ ಬಗ್ಗೆ ನಾನು ಏನೂ ಮಾತನಾಡಲಾರೆ. ಈಗಾಗಲೇ ನಾನು ನನ್ನ ಸಾಂಸಾರಿಕ ಜೀವನದ ಬಗ್ಗೆ ಸೋಶಿಯಲ್ ಪೋಸ್ಟ್ ಹಾಕಿದ್ದೇನೆ. ಎಲ್ಲ ವಿಚಾರವನ್ನು ನಾನು ಹೇಳಿದ್ದೇನೆ. ಮಕ್ಕಳ ವಿಚಾರವನ್ನೂ ಹಾಕಿದ್ದೇನೆ ಎಂದರು.
ಮೊದಲ ಪತ್ನಿ ನಗರತ್ನ ಅವರಿಗೆ ವಿಚ್ಛೇದನ ನೀಡಿದ ಬಳಿಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ದುನಿಯಾ ವಿಜಯ್, ನನಗೆ ಎರಡು ಹೆಣ್ಣುಮಕ್ಕಳಿದ್ದು, ಅವರಿಗೆ ಯಾವುದೇ ರೀತಿಯಲ್ಲೂ ಮುಜುಗರವಾಗಬಾರದು. ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾಧ್ಯಮಗಳಲ್ಲಾಗಲಿ ಅಥವಾ ಸಾರ್ವಜನಿಕವಾಗಲಿ ಮಾತನಾಡಲು ಇಚ್ಛಿಸುವುದಿಲ್ಲ ಎಂದು ತಿಲಿಸಿದ್ದಾರೆ.



