*ದೇವರಶೀಗಿಹಳ್ಳಿಯಲ್ಲಿ ಇ–ಸ್ವತ್ತು ಸರ್ವೆ ಪರಿಶೀಲನೆ: ನಿಖರ ಸರ್ವೇಗೆ ಸಿಇಓ ರಾಹುಲ್ ಶಿಂಧೆ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಚನ್ನಮ್ಮನ ಕಿತ್ತೂರು ತಾಲೂಕಿನ ದೇವರಶೀಗಿಹಳ್ಳಿ ಗ್ರಾಮ ಪಂಚಾಯತಿಗೆ ಮಂಗಳವಾರ ಭೇಟಿ ನೀಡಿ ನಡೆಯುತ್ತಿರುವ ಇ–ಸ್ವತ್ತು ಸ್ವಾಮಿತ್ವ ಸರ್ವೆ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿದರು.
ಗ್ರಾಮಕ್ಕೆ ಭೇಟಿ ನೀಡಿದ ಅವರು, ಪ್ರಸ್ತುತ ಸಾಗುತ್ತಿರುವ ಸರ್ವೇ ಕಾರ್ಯ ಹೇಗೆ ನಡೆಯುತ್ತಿದೆ, ಯಾವ ಹಂತಕ್ಕೆ ಬಂದಿದೆ, ಜನರಿಂದ ಸಹಕಾರ ಹೇಗಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದುಕೊಂಡರು. ನಂತರ ಗ್ರಾಮದ ಕೆಲವು ಭಾಗಗಳಿಗೆ ಸ್ವತಃ ಭೇಟಿ ನೀಡಿ ಸರ್ವೇ ನಡೆಯುತ್ತಿರುವ ವಿಧಾನವನ್ನು ಪರಿಶೀಲಿಸಿದರು.
ಸ್ಥಳೀಯ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಅವರ ಅಭಿಪ್ರಾಯ, ಅನುಭವ ಮತ್ತು ಸಮಸ್ಯೆಗಳನ್ನು ಆಲಿಸಿದರು.
ಇ–ಸ್ವತ್ತು ಸರ್ವೆ ಯೋಜನೆ ಗ್ರಾಮಸ್ಥರ ಆಸ್ತಿ ಹಕ್ಕುಗಳನ್ನು ಸ್ಪಷ್ಟಪಡಿಸಲು ಬಹಳ ಸಹಾಯಕವಾಗಿದೆ ಎಂದು ಅವರು ತಿಳಿಸಿದರು.
ಭವಿಷ್ಯದಲ್ಲಿ ಯಾವುದೇ ಗೊಂದಲಗಳು, ದಾಖಲೆ ಸಂಬಂಧಿತ ಸಮಸ್ಯೆಗಳು ಎದುರಾಗದಂತೆ ಈಗಲೇ ಸರಿಯಾದ ರೀತಿಯಲ್ಲಿ ಸರ್ವೇ ನಡೆಯಬೇಕು ಎಂದು ಸೂಚಿಸಿದರು. ಸರ್ವೇ ವೇಳೆ ಯಾವುದೇ ತಪ್ಪುಗಳು ಆಗಬಾರದು, ಎಲ್ಲ ವಿವರಗಳು ನಿಖರವಾಗಿ ದಾಖಲಾಗಬೇಕು ಎಂದು ಅವರು ಒತ್ತಿಹೇಳಿದರು.
ಸರ್ವೇ ಕೆಲಸವನ್ನು ರೋವರ್ ಸಿಸ್ಟಮ್ ಮತ್ತು ಕ್ವಾಂಟಮ್ GIS ತಂತ್ರಜ್ಞಾನ ಬಳಸಿ ಮುನ್ನಡೆಸಲಾಗುತ್ತಿದ್ದು, ತಂತ್ರಜ್ಞಾನದಿಂದ ಸಿಗುವ ನಿಖರ ಮಾಹಿತಿಯ ಆಧಾರದ ಮೇಲೆ ಗ್ರಾಮ ನಕ್ಷೆ ಸಿದ್ಧಪಡಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಚನ್ನಮ್ಮನ ಕಿತ್ತೂರು ತಾಲೂಕಿನ ದೇವರಶೀಗಿಹಳ್ಳಿಯನ್ನು ಮಾದರಿ ಗ್ರಾಮವಾಗಿ ಆಯ್ಕೆ ಮಾಡಿರುವುದರಿಂದ ಗ್ರಾಮ ಠಾಣಾ ವ್ಯಾಪ್ತಿಯನ್ನು 15 ದಿನಗಳೊಳಗೆ ಸಂಪೂರ್ಣವಾಗಿ ಗುರುತಿಸಬೇಕು ಎಂದು ಅವರು ನಿರ್ದೇಶಿಸಿದರು.
ಗ್ರಾಮ ಠಾಣಾ ವ್ಯಾಪ್ತಿಯನ್ನು ಕೂಡಲೆ ಗುರುತಿಸಿ ನಂತರ ಆ ವ್ಯಾಪ್ತಿಯೊಳಗಿನ ಎಲ್ಲ ಆಸ್ತಿಗಳ ಸರ್ವೇ ಮಾಡಿ, ಅದರ ಆಧಾರದ ಮೇಲೆ ಕರಡು ನಕ್ಷೆ ತಯಾರಿಸಬೇಕು. ನಂತರ ಗ್ರಾಮ ಪಂಚಾಯತಿ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿ, ಅವರಿಂದ ಆಕ್ಷೇಪಣೆಗಳು ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಬೇಕು. ಸಾರ್ವಜನಿಕರಿಂದ ಬಂದ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ, ಅನಿವಾರ್ಯ ತಿದ್ದುಪಡಿಗಳು ಮಾಡಿ ನಂತರ ಅಂತಿಮ ನಕ್ಷೆಯನ್ನು ಅನುಮೋದಿಸಬೇಕು ಎಂದು ಅವರು ಸೂಚಿಸಿದರು.
ಸರ್ವೇ ವೇಳೆ ಆಸ್ತಿಗಳನ್ನು ಗುರುತಿಸುವಲ್ಲಿ ಸ್ಪಷ್ಟತೆ ಇರಬೇಕೆಂದು ಹೇಳಿದ ಅವರು,
ಆಕ್ಷೇಪಣೆ ಇಲ್ಲದ ಆಸ್ತಿಗಳನ್ನು ಹಸಿರು ಬಣ್ಣದಲ್ಲಿ, ಆಕ್ಷೇಪಣೆ ಬಂದ ಆಸ್ತಿಗಳನ್ನು ಹಳದಿ ಬಣ್ಣದಲ್ಲಿ, ಅತಿಕ್ರಮಿತ ಆಸ್ತಿಗಳನ್ನು ಕೆಂಪು ಬಣ್ಣದಲ್ಲಿ ಗುರುತಿಸುವಂತೆ ಸೂಚಿಸಿದರು. ಇದರ ಮೂಲಕ ಸಾರ್ವಜನಿಕರಿಗೆ ಅವರ ಆಸ್ತಿಯ ಸ್ಥಿತಿ ಸ್ಪಷ್ಟವಾಗಿ ತಿಳಿಯುತ್ತದೆ ಮತ್ತು ಗೊಂದಲ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಭೂದಾಖಲೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ತಾಂತ್ರಿಕ ಸಿಬ್ಬಂದಿ ಎಲ್ಲರೂ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಹೇಳಿದರು. ಜನರ ಸಹಕಾರವೂ ಅತಿ ಅಗತ್ಯವಾಗಿದ್ದು, ಗ್ರಾಮಸ್ಥರು ಸರ್ವೇ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ, ಜಿಪಂಯ ಸಹಾಯಕ ನಿರ್ದೇಶಕರು ಚಂದ್ರಶೇಖರ ಬಾರ್ಕಿ, ಎನ್ಆರ್ ಡಿಎಂಎಸ್ ಓಂಕಾರ ಕೋರಿ
ತಾಪಂ ಸಹಾಯಕ ನಿರ್ದೇಶಕರು ಮಹಮ್ಮದ್ ಗೌಸ್ ರಿಸಲ್ದಾರ್, ವಿಜಯ ಪಾಟೀಲ್, ಎನ್ ಆರ್ ಡಿಎಂಎಸ್ ಓಂಕಾರ ಕೋರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಬಡಿಗೇರ, ಉಪಾಧ್ಯಕ್ಷೆ ವಿಜಯಾ ಹಂಚಿನಮನಿ, ಭೂಮಿ ದಾಖಲೆಗಳ ಸಹಾಯಕ ನಿರ್ದೇಶಕ ಅಶೋಕ ಹೊಸಕೇರಿ, ತಾಪಂ ಸಿಬ್ಬಂದಿ ಸಂಗನಗೌಡ ಹಂದ್ರಾಳ, ಪಿಡಿಓ ವಿನಯಕುಮಾರ ಕೊರವಿ, ಕಾರ್ಯದರ್ಶಿ ಮಡಿವಾಳಪ್ಪ ಕಲಭಾಂವಿ, ನರೇಗಾ ಸಿಬ್ಬಂದಿಗಳು, ಸರ್ವೇ ಸಿಬ್ಬಂದಿ ಹಾಗೂ ಪಂಚಾಯಿತಿ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.



