ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್ಲೋಡ್ ಮಾಡುವ ಒಂದು ವಿನೂತನ ಬೆಳೆ ಸಮೀಕ್ಷೆ ಯೋಜನೆಯನ್ನು ಜಾರಿಗೆ ತರುವ ಮೂಲಕ ದೇಶದಲ್ಲಿಯೇ ಒಂದು ಮಾದರಿ ಕಾರ್ಯವನ್ನು ಕರ್ನಾಟಕ ಸರಕಾರ ಜಾರಿಗೆ ತಂದಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕರ್ನಾಟಕ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರಾದ ಈರಣ್ಣ ಕಡಾಡಿ ಹೇಳಿದರು.
ಗುರುವಾರ ಸೆ-3 ರಂದು ಕಲ್ಲೋಳಿ ಪಟ್ಟಣದ ತಮ್ಮ ಸ್ವಂತ ಜಮೀನನಲ್ಲಿ ಬೆಳೆ ಸಮೀಕ್ಷೆ ಮೋಬೈಲ್ ಆ್ಯಪ ಮೂಲಕ ಮಾಹಿತಿಯನ್ನು ಅಪ್ಲೋಡ್ ಮಾಡಿ ಮಾತನಾಡಿದ ಕಡಾಡಿಯವರು ಈ ಯೋಜನೆಯು ಪ್ರಕೃತಿ ವಿಕೋಪದಡಿ ಅನಾವೃಷ್ಠಿ, ಅತೀವೃಷ್ಠಿ, ಪ್ರವಾಹ ಸಂದರ್ಭಗಳಲ್ಲಿ ರೈತರ ಬೆಳೆ ಹಾನಿ ಕುರಿತು ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್ ಅಡಿಯಲ್ಲಿ ಪರಿಹಾರ ನೀಡಲು ಅರ್ಹ ಫಲಾನುಭವಿಗಳನ್ನು ಗುರುತಿಸಲು ಬೆಳೆ ವಿಮಾ ಯೋಜನೆಯಡಿ ಬೆಳೆಗಳ ವಿವರ ಪರಿಶೀಲನೆಗೆ ಈ ಸಮೀಕ್ಷೆ ಅನುಕೂಲವಾಗಲಿದೆ ಎಂದರು.
ಕನಿಷ್ಠ ಬೆಂಬಲ ಬೆಲೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹಾಗೂ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ ಈ ಸಮೀಕ್ಷೆ ಅನುಕೂಲವಾಗಿದೆ. ಪ್ರತಿ ವರ್ಷ ಈ ಎಲ್ಲ ಬೆಳೆ ವಿವರಗಳ ಮಾಹಿತಿಗಳು ಆರ್.ಟಿ.ಸಿ (ಉತಾರ)ನಲ್ಲಿ ದಾಖಲಾಗುತ್ತವೆ. ಇದರಿಂದಾಗಿ ಇಡಿ ರಾಜ್ಯದಲ್ಲಿ ಸಂಪೂರ್ಣ ಬೆಳೆಗಳ ವಿವರ ಸರ್ಕಾರಕ್ಕೆ ಲಭ್ಯವಾಗತ್ತದೆ. ಇದರಿಂದ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಲಿಕ್ಕೆ ಸರಕಾರ ಯೋಜನೆ ತಯಾರಿಸಲು ಇದು ಅನುಕೂಲವಾಗಲಿದೆ, ಹೀಗಾಗಿ ರೈತರು 202021ನೇ ಸಾಲಿನ ಬೆಳೆ ಸಮೀಕ್ಷೆ ಯೋಜನೆಯಲ್ಲಿ ತಾವು ಖುದ್ದಾಗಿ ಭಾಗವಹಿಸುವ ಮೂಲಕ ಅಥವಾ ಅನುಭವಸ್ಥರ ಸಹಾಯಪಡೆದು ತಮ್ಮ ಜಮೀನುಗಳಲ್ಲಿರುವ ತಾವು ಬೆಳೆದ ಬೆಳೆಯ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‌ನಲ್ಲಿ ನಿಗದಿತ ಸಮಯದೊಳಗೆ ಅಪ್ಲೋಡ್ ಮಾಡಲು ಈರಣ್ಣ ಕಡಾಡಿ ವಿನಂತಿಸಿದರು.
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯು 14,82,566 ಪ್ಲಾಟ್‌ಗಳ ಪೈಕಿ 4,31,801 ಪ್ಲಾಟ್‌ಗಳ ಬೆಳೆ ಸಮೀಕ್ಷೆ ಮಾಡಿ ರಾಜ್ಯದಲ್ಲಿ ನಂಬರ್ 1 ಜಿಲ್ಲೆಯಾಗಿದೆ.
ಕಾರ್ಯಕ್ರಮದಲ್ಲಿ ಗೋಕಾಕ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ ಎಂ ನದಾಫ್, ಅರಭಾವಿ ಕೃಷಿ ಅಧಿಕಾರಿಗಳಾದ ಶಂಕರ ಹಳ್ಳದಮನಿ, ಮೂಡಲಗಿ ಕೃಷಿ ಅಧಿಕಾರಿಗಳಾದ ಪರಸಪ್ಪ ಹುಲಗಬಾಳೆ ಹಾಗೂ ಕಲ್ಲೋಳಿಯ ರೈತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ