*ಇಡಿ ಅಧಿಕಾರಿಗಳ ದಿಢೀರ್ ದಾಳಿ: ಹಣ ತುಂಬಿದ ಎರಡು ಬ್ಯಾಗ್ ಗಳನ್ನು 9ನೇ ಮಹಡಿಯಿಂದ ಕೆಳಗೆ ಎಸೆದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ಇಡಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ ಕಟ್ಟಡ 9 ನೇ ಮಹಡಿಯಿಂದ ಹಣ ತುಂಬಿದ ಬ್ಯಾಗ್ ಸಮೇತ ಕಿಟಕಿಯಿಂದ ಕೆಳಗೆ ಎಸೆದಿರುವ ಘಟನೆ ನಡೆದಿದೆ.
ಪಂಜಾಬ್‌ನ ಮೊಹಾಲಿ ಜಿಲ್ಲೆಯ ಖರಾರ್‌ನಲ್ಲಿ ವಸತಿ ಸಮುಚ್ಚಯದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕಟ್ಟಡದ ಒಂಬತ್ತನೇ ಮಹಡಿಯಿಂದ 500 ರೂಪಾಯಿ ಮುಖಬೆಲೆಯ ನೋಟುಗಳಿದ್ದ ಹಣದಚೀಲಗಳನ್ನು ಹೊರಕ್ಕೆ ಎಸೆಯಲಾಗಿದೆ.
ಇಡಿ ಅಧಿಕಾರಿಗಳು ಖರಾರ್‌ನ ‘ವೆಸ್ಟರ್ನ್ ಟವರ್ಸ್’ ವಸತಿ ಸಮುಚ್ಚಯದ 9ನೇ ಮಹಡಿಯಲ್ಲಿರುವ ಫ್ಲಾಟ್ ನಂಬರ್ 906 ಕ್ಕೆ ತಲುಪುತ್ತಿದ್ದಂತೆ ಅಲ್ಲಿಂದ ಎರಡು ಹಣದ ಚೀಲಗಳನ್ನು ಕಿಟಕಿಯಿಂದ ಕೆಳಕ್ಕೆ ಎಸೆಯಲಾಗಿದೆ.
ಅಧಿಕಾರಿಗಳು ಚೀಲಗಳಿಂದ ಸುಮಾರು 21 ರಿಂದ 25 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕೆಳಗೆ ಬಿದ್ದಿದ್ದ ಹಣವನ್ನು ತೆಗೆದುಕೊಂಡು ಓಡಿಹೋಗಲು ಯತ್ನಿಸಿದ ಬಿಳಿ ಕಾರಿನ ಚಾಲಕನನ್ನು ಇಡಿ ಅಧಿಕಾರಿಗಳು ಬೆನ್ನಟ್ಟಿ ಹಿಡಿದಿದ್ದಾರೆ.
ಐಟಿ ಉದ್ಯಮಿ ಎನ್ನಲಾದ ನಿತಿನ್ ಗೋಹಲ್ ಎಂಬುವವರಿಗೆ ಸೇರಿದ ಸ್ಥಳದಲ್ಲಿ ಇಡಿ ದಾಳಿ ನಡೆಸಿದೆ. ನಿತಿನ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವಿಶೇಷ ಕರ್ತವ್ಯಾಧಿಕಾರಿ ರಾಜಬೀರ್ ಸಿಂಗ್ ಘುಮ್ಮನ್ ಅವರ ಆಪ್ತರೆಂದು ವಿರೋಧ ಪಕ್ಷದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಆರೋಪಿಸಿದ್ದಾರೆ.
