
ಪ್ರಗತಿವಾಹಿನಿ ಸುದ್ದಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಎಸ್ ಐ ಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊಸ ಮತದಾರರ ನೋಂದಣಿ ಕುರಿತ ಫಾರಂ 6ರ ಹೆಚ್ಚುವರಿ ಘೋಷಣಾಪತ್ರವನ್ನು ಕೇಂದ್ರ ಚುನಾವಣಾ ಆಯೋಗ ಹಿಂಪಡೆದಿದೆ.
ಈ ಕ್ರಮವು ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ರಾಜ್ಯಗಳಲ್ಲಿ ಹೊಸ ಮತದಾರರ ನೋಂದಣಿ ಪ್ರಕ್ರಿಯೆಯನ್ನು ಗಣನೀಯವಾಗಿ ಸರಳಗೊಳಿಸಲಿದೆ. ಫಾರಂ 6 ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಫಾರಂ 6 ಎನ್ನುವುದು ಭಾರತೀಯ ಚುನಾವಣಾ ಆಯೋಗವು ನಿರ್ದಿಷ್ಟಪಡಿಸಿದ ಅಧಿಕೃತ ಅರ್ಜಿಯಾಗಿದೆ. 18 ವರ್ಷ ತುಂಬಿದ ಅಥವಾ ತುಂಬುತ್ತಿರುವ ಯಾವುದೇ ಅರ್ಹ ಭಾರತೀಯ ನಾಗರಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಈ ನಮೂನೆಯನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ.
ಈ ಅರ್ಜಿಯ ಮೂಲಕ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅವಕಾಶವಿದೆ. ಆದರೆ, ಈಸಿಐ ನೆಟ್ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದ ಆನ್‌ಲೈನ್ ಫಾರಂ 6ನಲ್ಲಿ ಚುನಾವಣಾ ಆಯೋಗವು ಹೊಸದೊಂದು ಘೋಷಣಾ ವಿಭಾಗವನ್ನು ಸೇರಿಸಿತ್ತು. ಈ ವಿಭಾಗದ ಅನ್ವಯ, ಹೊಸದಾಗಿ ನೋಂದಾಯಿಸಿಕೊಳ್ಳುವ ಯುವ ಮತದಾರರು ತಮ್ಮ ಪೋಷಕರು ಅಥವಾ ಅಜ್ಜ ಅಜ್ಜಿಯಂದಿರ ಹೆಸರುಗಳು ಹಿಂದಿನ ಕರಡು ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿವೆಯೇ ಇಲ್ಲವೇ ಎಂಬುದರ ಬಗ್ಗೆ ವಿವರಗಳನ್ನು ನೀಡಬೇಕಾಗಿತ್ತು. ಈ ಪ್ರಶ್ನೆಯು ಕಡ್ಡಾಯವಲ್ಲ ಎಂದು ನಮೂದಿಸಿದ್ದರೂ, ಆನ್‌ಲೈನ್‌ನಲ್ಲಿ ಆ ಪ್ರಶ್ನೆಗೆ ಉತ್ತರ ನೀಡದೆ ಇದ್ದರೆ ಅರ್ಜಿ ಪ್ರಕ್ರಿಯೆಯು ಮುಂದಕ್ಕೆ ಸಾಗುತ್ತಿರಲಿಲ್ಲ. ಇದರಿಂದಾಗಿ ಅನೇಕ ಹೊಸ ಮತದಾರರು ನೋಂದಣಿ ಪ್ರಕ್ರಿಯೆಯಲ್ಲಿ ತೊಂದರೆಗಳನ್ನು ಎದುರಿಸಬೇಕಾಗಿತ್ತು, ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಲ್ಲದೇ ಸಾರ್ವಜನಿಕ ಆಕ್ಷೇಪಗಳು ವ್ಯಕ್ತವಾಗಿದ್ದವು. ಚುನಾವಣಾ ಆಯೋಗದೊಳಗೆ ಇಬ್ಬರು ಆಯುಕ್ತರು ಈ ನಿಯಮದ ವಿರುದ್ಧ ಧ್ವನಿಯೆತ್ತಿದ್ದರು. ಅವರು ಈ ಪ್ರಕ್ರಿಯೆಯನ್ನು “ಕಾನೂನುಬಾಹಿರ” ಎಂದು ಕರೆದಿದ್ದು, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧವೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಬೆಳವಣಿಗೆ ಬೆನ್ನಲ್ಲೇ ಫಾರಂ 6ರ ಹೆಚ್ಚುವರಿ ಎಸ್‌ಐಆರ್ ಘೋಷಣಾಪತ್ರವನ್ನು ಹಿಂಪಡೆಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




