*ಕರಾಟೆಯನ್ನು ಪ್ರತಿಯೊಬ್ಬ ಹೆಣ್ಣುಮಕ್ಕಳು ಕಡ್ಡಾಯವಾಗಿ ಕಲಿಯಲೇಬೇಕು: ಶಾಸಕ ಹಲಗೇಕರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇವಲ ಕೈ-ಕಾಲು ಉಪಯೋಗಿಸಿ ಶಸ್ತ್ರಾಸ್ತ್ರ ರಹಿತವಾಗಿ ಹೋರಾಡುವ ಕಲೆ ಕರಾಟೆ. ಈ ವಿದ್ಯೆ ಆಪತ್ಕಾಲದಲ್ಲಿ ಜೀವ ರಕ್ಷಣೆಗೆ ನೆರವಾಗುತ್ತದೆ. ಹೀಗಾಗಿ ಕರಾಟೆಯನ್ನು ಮಕ್ಕಳು ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕಡ್ಡಾಯವಾಗಿ ಕಲಿಯಲೇಬೇಕು” ಎಂದು ಶಾಸಕ ಹಾಗೂ ಶ್ರೀ ಮಹಾಲಕ್ಷ್ಮಿ ಗ್ರೂಪ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ವಿಠ್ಠಲ ಹಲಗೇಕರ ಕರೆ ನೀಡಿದರು.
ಸ್ಥಳೀಯ ಶಾಂತಿನಿಕೇತನ ಶಾಲೆಯ ಆವರಣದಲ್ಲಿ ಶನಿವಾರ ಮತ್ತು ಭಾನುವಾರ ವಿದ್ಯಾಭಾರತಿ ಕರ್ನಾಟಕ ಪ್ರಾಯೋಜಕತ್ವ ಮತ್ತು ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಗ್ರೂಪ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ನಮ್ಮ ಶಾಲೆಗೆ ವಿದ್ಯಾಭಾರತಿ ಒದಗಿಸಿರುವ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ರಾಜ್ಯದ 16 ಜಿಲ್ಲೆಗಳಿಂದ 36 ತಂಡಗಳು ಭಾಗವಹಿಸಿವೆ. ವಿವಿಧ ಶಾಲೆಗಳ 200ಕ್ಕೂ ಹೆಚ್ಚು ಕರಾಟೆ ಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಇಲ್ಲಿಂದ ವಿಜೇತರು ರಾಷ್ಟ್ರಮಟ್ಟದಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ” ಎಂದರು.
ಎರಡು ದಿನಗಳ ಕಾಲೆ ಶಾಲೆಯ ಆವರಣದಲ್ಲಿ ನಡೆದ ಕರಾಟೆಪಟುಗಳ ತುರುಸಿನ ಸೆಣಸಾಟ ಕರಾಟೆಪ್ರಿಯರನ್ನು ಮಂತ್ರಮುಗ್ಧವಾಗಿಸಿತ್ತು. ಉಡುಪಿ, ಮಂಗಳೂರು, ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ಮೈಸೂರು, ಹಾಸನ, ದಾವಣಗೆರೆ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಕರಾಟೆ ತಂಡಗಳು ವಿವಿಧ ಶ್ರೇಣಿಗಳಲ್ಲಿ ರಾಜ್ಯಮಟ್ಟದಲ್ಲಿ ಜಯಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡವು. ವಿಜೇತ ತಂಡಗಳು ಮತ್ತು ಎರಡನೇ ಕ್ರಮಾಂಕ ಗಳಿಸಿದ ತಂಡಗಳಿಗೆ ವಿದ್ಯಾಭಾರತಿ ವತಿಯಿಂದ ಪ್ರಮಾಣಪತ್ರ ಮತ್ತು ಪಾರಿತೋಷಕ ವಿತರಿಸಲಾಯಿತು. ರಾಜ್ಯದ ವಿವಿಧ ಶಾಲೆಗಳಿಂದ ಆಗಮಿಸಿದ್ದ ಕರಾಟೆ ಶಿಕ್ಷಕರು, ಪಂದ್ಯಾವಳಿ ಸಂಘಟಕರು ಮತ್ತು ಪಂದ್ಯಾವಳಿಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದವರನ್ನು ಶಾಂತಿನಿಕೇತನ ಶಾಲೆಯ ವತಿಯಿಂದ ಗೌರವಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಆರ್.ಎಸ್.ಎಸ್ ಮುಖಂಡ ಸುಭಾಸ ದೇಶಪಾಂಡೆ, ಮಹಾಲಕ್ಷ್ಮಿ ಗ್ರೂಪ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಚಾಂಗಪ್ಪ ನಿಲಜಕರ, ವಿಠ್ಠಲ ಕರಂಬಳಕರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕರಾಟೆ ಪಟುಗಳು, ನಿರ್ಣಾಯಕರು, ಶಾಂತಿನಿಕೇತನ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಮತ್ತು ಆಹ್ವಾನಿತರು ಉಪಸ್ಥಿತರಿದ್ದರು. ಸಂಭಾಜಿ ಕದಮ ಕಾರ್ಯಕ್ರಮ ನಿರ್ವಹಿಸಿದರು. ಸ್ವಾತಿಕಮಲ ವಾಳ್ವೆ ಸ್ವಾಗತಿಸಿದರು. ಮನೀಷಾ ಭೋಸಲೆ ವಂದಿಸಿದರು.