ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಾಜಿ ಶಾಸಕ ಸಂಭಾಜಿ ಪಾಟೀಲ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಕಿಡ್ನಿ ವೈಫಲ್ಯ ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಅವರು ಬಳಲುತ್ತಿದ್ದರು. ಶುಕ್ರವಾರ ರಾತ್ರಿ 8.30ರ ಹೊತ್ತಿಗೆ ಅವರು ಕೊನೆಯುಸಿರೆಳೆದರು. 4 ಬಾರಿ ಬೆಳಗಾವಿ ಮಹಾಪೌರರಾಗಿ ಕೆಲಸ ಮಾಡಿದ್ದರು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾಗಿ ಒಂದು ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದರು.
ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ರಾತ್ರಿ ಕೆಎಲ್ಇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ತಕ್ಷಣ ಚಿಕಿತ್ಸೆ ಆರಂಭಿಸಿದ್ದರೂ, ಅಷ್ಟರಲ್ಲಾಗಲೇ ಅವರು ನಿಧನರಾಗಿದ್ದರು.
ನಮ್ಮ ವೈದ್ಯರು ಸಂಭಾಜಿ ಪಾಟೀಲ ಅವರನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡಿದರು. ಆದರೆ ಆಸ್ಪತ್ರೆಗೆ ಬರುವ ವೇಳೆಗೇ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಚಿಕಿತ್ಸೆ ಆರಂಭಿಸುವ ಹೊತ್ತಿಗೇ ಅವರು ಸಾವನ್ನಪ್ಪಿದರು ಎಂದು ಕೆಎಲ್ಇ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಪ್ರಗತಿವಾಹಿನಿಗೆ ತಿಳಿಸಿದರು.
ಸಂಭಾಜಿ ಪಾಟೀಲ 2014ರ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಸ್ಪರ್ಧಿಸಿ, ಬಿಜೆಪಿಯ ಅಭಯ ಪಾಟೀಲ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ಅಭಯ ಪಾಟೀಲ ಶೋಕ: ಸಂಭಾಜಿ ಪಾಟೀಲ ನಿಧನಕ್ಕೆ ಶಾಸಕ ಅಭಯ ಪಾಟೀಲ ಶೋಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂದೇಶ ನೀಡಿರುವ ಅವರು, ಸಂಭಾಜಿ ಪಾಟೀಲ ಶಾಸಕರಾಗಿ, ಮಹಾಪೌರರಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದ್ದಾರೆ.
ಬೆಳಗಾವಿ ಮಹಾನಗರದ ಜನತೆಗೆ ತನ್ನದೇ ಆದ ಕೊಡುಗೆಯನ್ನು ಸಂಭಾಜಿ ಪಾಟೀಲ್ ಕೊಟ್ಟಿದ್ದು , ನಾವು ಎಂದಿಗೂ ಮರೆಯಬಾರದು. ಕುಡಿಯುವ ನೀರು (ಹಿಡಕಲ್ ಜಲಾಶಯ ) ಮತ್ತು ರಸ್ತೆ ಅಗಲೀಕರಣ ಜೊತೆಗೆ ಮಹಾನಗರ ಪಾಲಿಕೆಯಲ್ಲಿ ತನ್ನದೆ ಆದ ಛಾಪನ್ನು ಇಟ್ಟುಕೊಂಡು ಹೊಸ ಸದಸ್ಯರಿಗೆ ಭಾಷಾಬೇಧ, ಪಕ್ಷಪಾತ ವನ್ನು ಮರೆತು ಮಾರ್ಗದರ್ಶನ ಮಾಡುತ್ತಿದ್ದ ಒಬ್ಬ ವಿಶಿಷ್ಠ ಸ್ವಭಾವದ ವ್ಯಕ್ತಿಯಾಗಿದ್ದರು ಎಂದು ಪಾಲಿಕೆಯ ಮಾಜಿ ಸದಸ್ಯ ದೀಪಕ್ ಜಮಖಂಡಿ ಸ್ಮರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ