
ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪ ತಲುಪಿದ್ದು, ಅಭಿಮನ್ಯು ಆನೆ 6ನೇ ಬಾರಿಗೆ ಯಶಸ್ವಿಯಾಗಿ ಚಿನ್ನದ ಅಂಬಾರಿಯನ್ನು ಹೊತ್ತಿದೆ.
ಸಂಜೆ 4:42ರಿಂದ 5:06ರ ನಡುವೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿರುವ ತಾಯಿ ಚಾಮುಂಡಿ ಮಾತೆಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ರಾಜವಂಶಸ್ಥ ಯದುವೀರ್ ಒಡೆಯರ್, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಹೆಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ ಸೇರಿದಂತೆ ಹಲವು ಗಣ್ಯರು ತಾಯಿ ಚಾಮುಂಡಿ ಮಾತೆಗೆ ಪುಷ್ಪಾರ್ಚನೆ ಮಾಡಿದರು.
ಕ್ಯಾಪ್ಟನ್ ಅಭಿಮನ್ಯು ಆನೆ 6ನೇ ಬಾರಿಗೆ ತಾಯಿ ಚಾಮುಂಡಿ ದೇವಿ ವಿರಾಜಮಾನವಿಗಿರುವ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ರಾಜ ಗಾಂಭೀರ್ಯಯ್ದಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಬನ್ನಿಮಂಟಪ ತಲುಪಿದ್ದಾನೆ. ಅಭಿಮನ್ಯುಗೆ ಕುಮ್ಕಿ ಆನೆಗಳು ಇತರ ಆನೆಗಳು ಸೇರಿ 14 ಆನೆಗಳು ಸಾಥ್ ನೀಡಿದವು.
120ಕ್ಕೂ ಹೆಚ್ಚು ಕಲಾತಂಡಗಳು, ವಿವಿಧ ಜಿಲ್ಲೆಗಳ 58 ಸ್ತಬ್ಧಚಿತ್ರಗಳು ಅಶ್ವಾರೋಹಿದಳ, ವಾದ್ಯ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಲಕ್ಷ ಲಕ್ಷ ಜನರು ಜಂಬೂ ಸವಾರಿ ಮೆರವಣಿಯನ್ನು ಕಣ್ತುಂಬಿಕೊಂಡರು.
ಸಂಜೆ 6:45ರ ಸುಮಾರಿಗೆ ಜಂಬೂ ಸವಾರಿ ಮೆರವಣಿಗೆ ಬನ್ನಿಮಂಟಪ ತಲುಪಿತು. 2 ಗಂಟೆ 10 ನಿಮಿಷಗಳಲ್ಲಿ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ತಾಯಿ ಚಾಮುಂಡಿ ದೇವಿ ವಿರಾಜಮಾನವಾಗಿರುವ ಚಿನ್ನದ ಅಂಬಾರಿ ಹೊತ್ತು ಬನ್ನಿಮಂಟಪವನ್ನು ಯಶಸ್ವಿಯಾಗಿ ತಲುಪಿದ್ದಾನೆ. ಈ ಮೂಲಕ 2025ರ ಜಂಬೂಸವಾರಿ ಮೆರವಣಿಗೆ ಸಂಪನ್ನವಾಗಿದೆ.