
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿದರು.
ಇಂದಯ ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ, ಕೈಯಲ್ಲಿ ಹಾಳಾಗಿರುವ ಬೆಳೆಗಳನ್ನು ಹಿಡಿದು, ರಸ್ತೆ ಮೇಲೆ ಹೊರಳಾಡಿ ಪ್ರತಿಭಟನೆ ನಡೆಸಿದ ರೈತ ಹೋರಾಟಗಾರರು ರಾಜ್ಯ ಸರ್ಕಾರ, ಸಿಎಂ ಡಿ.ಕೆ.ಶಿವಕುಮಾರ ವಿರುದ್ಧ ದಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ರಸ್ತೆ ಮೇಲೆ ಬಾರುಕೋಲು ಏಟು ಬಾರಿಸಿ ತಮ್ಮೊಳಗಿನ ಅಸಮಾಧಾನ ಹೊರ ಹಾಕಿದರು.
ಬಳಿಕ ಅಲ್ಲಿಯೇ ಮೂರು ಗಂಟೆ ಧರಣಿ ಕುಳಿತ ಪ್ರತಿಭಟನಾಕಾರರು, ಸರ್ಕಾರ ಬರದ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ತಾಲ್ಲೂಕುಗಳನ್ನ ಕೈಬಿಟ್ಟಿದೆ. ಸರ್ಕಾರ ತಕ್ಷಣವೇ ಬರ ಪಟ್ಟಿಗೆ ಬೆಳಗಾವಿ ಜಿಲ್ಲೆ ಸೇರಿಸಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಪ್ರತಿ ಎಕರೆಗೆ 50 ಸಾವಿರ ಬರ ಪರಿಹಾರ ಕೊಡಬೇಕು. ಅತೀಯಾದ ಲೋಡ್ ಶೆಡ್ಡಿಂಗ್ ಮಾಡಬಾರದು. ರೈತರಿಗೆ ಸರ್ಕಾರ ಉಚಿತವಾಗಿ ವಿದ್ಯುತ್ ನೀಡುವಂತೆ ಒತ್ತಾಯಿಸಿದರು.
ಬೆಳಗಾವಿ ಜಿಲ್ಲೆಯ 18 ಶಾಸಕರು ಯಾವುದಕ್ಕೂ ಉಪಯೋಗ ಇಲ್ಲ. ರೈತರನ್ನು ವೋಟ್ ಹಾಕಿಸಿಕೊಳ್ಳಲು ಮತ್ತು ತಮ್ಮ ಸೇವೆ ಮಾಡಿಸಿಕೊಳ್ಳಲು ಬಳಸುತ್ತಿದ್ದಾರೆ. ಎಕರೆಗೆ 50 ಟನ್ ಬರುತ್ತಿದ್ದ ಕಬ್ಬು 20 ಟನ್ ಬರುವಂತೆ ಆಗಿದೆ. ಎಕರೆಗೆ 12 ಕ್ವಿಂಟಲ್ ಬರುತ್ತಿದ್ದ ಸೋಯಾಬಿನ್ ಕೇವಲ 1 ಕ್ವಿಂಟಲ್ ಬರುತ್ತಿದೆ. ರೈತರ ಪರಿಸ್ಥಿತಿ ಗಂಭೀರವಾಗಿದೆ.
ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ವಿಧಾನಸೌಧ ಮುಂದೆ ಧರಣಿ ಕುಳಿತು ಜಿಲ್ಲೆಯ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ಇನ್ನು ಸಿಎಂ ಡಿ.ಕೆ.ಶಿವಕುಮಾರ ಅವರು ಸತ್ಯಂ ಶಿವಂ ಸುಂದರಂ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ನಡೆಯುವುದಿಲ್ಲ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಂದರೆ ಮಾತ್ರ ಆ ಮಾತಿಗೆ ನಿಜವಾದ ಅರ್ಥ ಬರುತ್ತದೆ ಎಂದು ಚೂನಪ್ಪ ಪೂಜಾರಿ ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪ್ರಕಾಶ ನಾಯಿಕ, ಕಿಶನ್ ನಂದಿ, ಪ್ರೇಮ್ ಚೌಗುಲಾ, ರವಿ ಸಿದ್ದಮ್ಮನವರ ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.



