*ಕೊನೆಗೂ ಕನ್ನಡ ಪರ ಹೋರಾಟಕ್ಕೆ ಜಯ?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸಬೇಕೆಂಬ ಕನ್ನಡ ಸಂಘಟನೆಗಳ ಬೇಡಿಕೆಯನ್ನು ರಾಜ್ಯ ಸರಕಾರ ಪುರಸ್ಕರಿಸಿ ಅಧಿಕೃತ ಆದೇಶ ಹೊರಡಿಸಿದೆ ಎಂದು ಬೆಳಗಾವಿಯ ಕನ್ನಡ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಕನ್ನಡ ಹೋರಾಟಗಾರ ಅಶೋಕ ಚಂದರಗಿ ಈ ಕುರಿತು ಹೇಳಿಕೆ ನೀಡಿದ್ದು, ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸಬೇಕೆಂಬ ಕನ್ನಡ ಸಂಘಟನೆಗಳ ಬೇಡಿಕೆಯನ್ನು ರಾಜ್ಯ ಸರಕಾರ ಪುರಸ್ಕರಿಸಿ ಅಧಿಕೃತ ಆದೇಶ ಹೊರಡಿಸಿದ್ದು, ಎಲ್ಲ ವಿವರಗಳನ್ನು ಮಂಗಳವಾರ ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ನೀಡಲಾಗುವದು ಎಂದು ಸೋಮವಾರ ರಾತ್ರಿ ತಿಳಿಸಿದ್ದಾರೆ. ಆದೇಶದ ಪ್ರತಿ ಮಂಗಳವಾರ ಮುಂಜಾನೆ ನಮ್ಮ ಕೈ ಸೇರಲಿದೆ ಎಂದೂ ಅವರು ತಿಳಿಸಿದ್ದಾರೆ.
ಬೆಳಗಾವಿಯ ಸಮಾನ ಮನಸ್ಕ ಕನ್ನಡ ಸಂಘಟನೆಗಳ ವತಿಯಿಂದ ಮಂಗಳವಾರ ಮುಂಜಾನೆ 11 ಗಂಟೆಗೆ ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾ ಪರಿಷತ್ತನ್ನು ಕರೆಯಲಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ನಮ್ಮದು ಎನ್ನುವ ಗೊತ್ತುವಳಿ ಅಂಗೀಕರಿಸಬೇಕೆಂದು ಕಳೆದ ಹಲವು ತಿಂಗಳುಗಳಿಂದ ಕನ್ನಡ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಆದರೆ ಮಹಾನಗರ ಪಾಲಿಕೆ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸದಿರುವುದರಿಂದ ವಿಷಯ ರಾಜ್ಯ ಸರಕಾರದ ಮಟ್ಟಕ್ಕೆ ತಲುಪಿತ್ತು. ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ ಕೂಡ ಈ ಬಗ್ಗೆ ವಿವರ ವರದಿ ಪಡೆದಿದ್ದರು. ಇದೀಗ ಗೊತ್ತುವಳಿ ಅಂಗೀಕರಿಸುವಂತೆ ಸರಕಾರದ ಆದೇಶವಾಗಿದೆ ಎಂದು ಚಂದರಗಿ ತಿಳಿಸಿದ್ದು, ಕನ್ನಡ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.
ಕನ್ನಡ ನಾಡಿನಲ್ಲಿ ಕನ್ನಡ ಪರ ಗೊತ್ತುವಳಿ ಅಂಗೀಕರಿಸಲು ಹೋರಾಟವನ್ನೇ ಮಾಡಬೇಕಾದ ಪರಿಸ್ಥಿತಿ ಬಂದಿದ್ದು ವಿಪರ್ಯಾಸವೇ ಆಗಿದೆ.




