*24,300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯಿಂದ ಸಮ್ಮತಿ: ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಒಳ ಮೀಸಲಾತಿ ನೀಡುವ ಬಗ್ಗೆ ಈಗಾಗಲೇ ತೀರ್ಮಾನವಾಗಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದರು.
ಪರಿಷತ್ತಿನಲ್ಲಿ ಡಿ.11ರಂದು ಪ್ರಶ್ನೋತ್ತರ ವೇಳೆ ಸದಸ್ಯ ನಿರಾಣಿ ಹನುಮಂತಪ್ಪ ರುದ್ರಪ್ಪ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, 2025-26ನೇ ಸಾಲಿನಲ್ಲಿ ಇಲಾಖಾವಾರು ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ವಿವಿಧ ನಿಗಮ ಮತ್ತು ಮಂಡಳಿಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಸೇರಿ 1,01,420 ಹುದ್ದೆಗಳು ಖಾಲಿ ಇವೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 14,677 ಹುದ್ದೆಗಳು ಖಾಲಿ ಇವೆ.
ಖಾಲಿ ಇರುವ ಒಟ್ಟು 2,84,881 ಹುದ್ದೆಗಳ ಪೈಕಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಎರಡೂ ಸೇರಿ 96,844 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಿದ್ದು, ಇನ್ನುಳಿದ 1,88,037 ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು. ಈ ಪೈಕಿ 2023-24 ರಿಂದ 2024-25ರವರೆಗೆ ಗ್ರೂಪ್ ಎ 562, ಗ್ರೂಪ್ ಬಿ 619, ಗ್ರೂಪ್ ಸಿ 23,119 ಸೇರಿ ಒಟ್ಟು 24,300 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಯಿಂದ ಮಂಜೂರಾತಿ ಸಿಕ್ಕಿದೆ ಎಂದು ತಿಳಿಸಿದರು.
ಆರ್ಥಿಕ ಇಲಾಖೆಯಿಂದ ಒಪ್ಪಿಗೆ ದೊರೆತ 24,300 ಹುದ್ದೆಗಳು ಮತ್ತು 371(ಜೆ) ಮೀಸಲು ಸೌಕರ್ಯ ಇರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭರ್ತಿಯಾಗಬೇಕಾದ 32,132 ಹುದ್ದೆಗಳು ಸೇರಿ ಒಟ್ಟು 56,132 ಹುದ್ದೆಗಳ ಭರ್ತಿ ಪ್ರಕ್ರಿಯೆ ಈಗ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡ ಸೇರಿದಂತೆ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಖಾಲಿ ಹುದ್ದೆಗಳ ಭರ್ತಿಗೆ ಮೊದಲ ಆದ್ಯತೆ ನೀಡಿ ವಿದ್ಯಾರ್ಥಿ ಯುವಜನರಿಗೆ ನ್ಯಾಯ ಒದಗಿಸಬೇಕು ಎಂದು ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಮನವಿ ಮಾಡಿದರು.




