Latest

*ನಾಲ್ವರಿಗೆ ಥಳಿತ: ಅನಂತ್‌ ಕುಮಾರ್‌ ಹೆಗಡೆ ವಿರುದ್ಧ ಎಫ್ಐಆರ್*

ಪ್ರಗತಿವಾಹಿನಿ ಸುದ್ದಿ: ಅನಂತ್‌ ಕುಮಾರ್‌ ಹೆಗಡೆ ಅವರು ತೆರಳುತ್ತಿದ್ದ ಕಾರನ್ನು ಓವರ್​ ಟೇಕ್​ ಮಾಡಲಾಯಿತು ಎಂಬ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ, ಅನಂತ್ ಕುಮಾರ್​ ಹೆಗಡೆ ಪುತ್ರ ಅಶುತೋಷ್, ಚಾಲಕ ಹಾಗೂ ಗನ್​​ಮ್ಯಾನ್​ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ಘಟನೆ ನಡೆದಿದೆ. ಅನಂತ ಕುಮಾರ್ ಹೆಗಡೆ ಪುತ್ರ ಅಶುತೋಷ್, ಗನ್‌ಮ್ಯಾನ್‌ ಶ್ರೀಧರ್, ಚಾಲಕ ಮಹೇಶ್ ವಿರುದ್ಧ ಹಲ್ಲೆ  ದೂರು ದಾಖಲಾಗಿದೆ. ಘಟನೆ ವೇಳೆ ಅನಂತ ಕುಮಾರ್ ಹೆಗಡೆ ಸಹ ಕಾರಿನಲ್ಲಿದ್ದು, ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಇನ್ನೋವಾ ಕಾರಿನಲ್ಲಿ ಸಲ್ಮಾನ್, ಸೈಫ್‌, ಇಲಿಯಾಜ್ ಖಾನ್‌ ಹಾಗೂ ಉನ್ನೀಸಾ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಅವರಿಗೆ ದಾಬಸ್‌ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಲ್ಲೆಗೊಳಗಾಗಿದ್ದ ಸೈಫ್ ನೀಡಿದ ದೂರಿನ ಮೇರೆಗೆ ದಾಬಸ್​​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಅನಂತಕುಮಾರ್ ಹೆಗಡೆ, ಗನ್‌ಮ್ಯಾನ್ ಶ್ರೀಧರ್‌, ಕಾರು ಚಾಲಕ ಮಹೇಶ್‌ ಮತ್ತು ಇತರರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಬಿಎನ್​ಎಸ್ ಕಾಯ್ದೆಯ 6 ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಪೊಲೀಸ್​ ಠಾಣೆ ಬಳಿ ರಾತ್ರಿಯೇ ಜನರು ದೌಡಾಯಿಸಿದರು. ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಕೂಡ ಆಗಮಿಸಿದರು. ಠಾಣೆ ಎದುರು ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button