NationalTravel

*ಏರ್ ಶೋ ವೇಳೆ ಉಂಟಾದ ಜನ ದಟ್ಟನೆಗೆ ಐವರು ಸಾವು*

 ಪ್ರಗತಿವಾಹಿನಿ ಸುದ್ದಿ: ಭಾರತೀಯ ವಾಯುಪಡೆಯ 92 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆಗಾಗಿ ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾನುವಾರ ಏರ್ ಶೋ ಆಯೋಜನೆ ಮಾಡಲಾಗಿತ್ತು. ಈ ವೇಳೆ ಉಂಟಾದ ಜನ ದಟ್ಟನೆ ಮತ್ತು ಬಿಸಿಲಿನ ತಾಪಕ್ಕೆ ಐವರು ಸಾವನ್ನಪ್ಪಿದ್ದಾರೆ.‌

ಚೆನ್ನೈ ಏರ್ ಶೋ ದುರಂತದಲ್ಲಿ ಐವರು ಮೃತಪಟ್ಟರೆ ಅಸ್ವಸ್ಥರಾದವರ ಸಂಖ್ಯೆ 200ಕ್ಕೂ ಹೆಚ್ಚು ದಾಟಿದೆ. ಕಾರ್ಯಕ್ರಮದಲ್ಲಿ 72 ವಿಮಾನಗಳು ವಿವಿಧ ಸಾಹಸಗಳನ್ನು ಪ್ರದರ್ಶಿಸಿದವು. ಈ ಏರ್ ಶೋ ವೀಕ್ಷಿಸಲು ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ದರು.ಏರ್ ಶೋ ನೋಡಲು ತೆರಳಿದ್ದ 93 ಮಂದಿ ಜನದಟ್ಟಣೆ ಹಾಗೂ ಬಿಸಿಲಿನ ತಾಪದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ . 200ಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿ, ಮೂರ್ಚೆ ಸಮಸ್ಯೆ ಕಾಣಿಸಿಕೊಂಡಿದ್ದು, 93 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರ ವಿವರ ಕೂಡ ಹೊರಬಿದ್ದಿದೆ.

ಜಾನ್ ಎನ್ನುವ 60 ವರ್ಷದ ವ್ಯಕ್ತಿ ಮರೀನಾ ಬೀಚ್‌ನಲ್ಲಿ ಏರ್ ಶೋ ನೋಡುವ ಸಂದರ್ಭದಲ್ಲಿ ಬಿಸಿಲಿನ ತಾಪದಿಂದ ನಿತ್ರಾಣನಾಗಿ ಸಾವನಪ್ಪಿದ್ದಾನೆ. ಮತ್ತೋರ್ವ ಸಾವನ್ನಪ್ಪಿರುವ ವ್ಯಕ್ತಿಯನ್ನು ತಿರುವೊಟ್ಟಿಯೂರು ಮೂಲದ ಕಾರ್ತಿಕೇಯನ್ ಎಂದು ಗುರುತಿಸಲಾಗಿದೆ. ಅಲ್ಲದೆ 37 ವರ್ಷದ ದಿನೇಶ್ ಕುಮಾರ್, ಪೆರುಂಗಲತ್ತೂರಿನ ಶ್ರೀನಿವಾಸನ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಾಯಪೆಟ್ಟಾ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಕೂಡ ಮೃತಪಟ್ಟಿದ್ದು ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button