ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಸದ್ಯಕ್ಕೆ ಯಾವುದೇ ವಿದೇಶ ಪ್ರವಾಸ ಕೈಗೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು
ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ದಾವೋಸ್ನಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮವು ಜೂನ್ ಮಾಹೆಗೆ ಮುಂದೂಡಿಕೆಯಾಗಿದೆ. ಹೀಗಾಗಿ ಸದ್ಯ ಯಾವುದೇ ವಿದೇಶ ಪ್ರವಾಸಕೈಗೊಳ್ಳುತ್ತಿಲ್ಲ, ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಓಮಿಕ್ರಾನ್ ಹೆಚ್ಚಳದ ಬಗ್ಗೆ ನಾಳೆ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ
ಓಮಿಕ್ರಾನ್ ಪ್ರಕರಣಗಳ ನಿಯಂತ್ರಣಕ್ಕೆ ಕುರಿತಂತೆ ಭಾನುವಾರ ತಜ್ಞರ ಜೊತೆ ಸಮಾಲೋಚನೆ ನಡೆಸಲು ಸಭೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕರ್ನಾಟಕದ ಗಡಿ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಮತ್ತು ತಮಿಳನಾಡು ರಾಜ್ಯದಲ್ಲಿಯೂ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ ಎಂದರು.
ಬೆಂಗಳೂರಿನಲ್ಲಿ ನಾಳೆ ತಜ್ಞರುಗಳೊಂದಿಗೆ ಸಭೆ ನಡೆಸಿ ಈಗಿರುವ ಸ್ಥಿತಿಗಳಿಗೆ ಅನುಗುಣವಾಗಿ ರಾಜ್ಯದಲ್ಲಿ ಕೈಗೊಳ್ಳಬೇಕಾಗಿರುವ ಮುಂದಿನ ಕ್ರಮಗಳ ಕುರಿತಂತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
*ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ವಿಶೇಷ ಕಾರ್ಯಕ್ರಮ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ*
ಹುಬ್ಬಳ್ಳಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಶತಮಾನೋತ್ಸವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.
ಅವರು ಇಂದು ಹುಬ್ಬಳ್ಳಿಯ ಅಮರಗೋಳದಲ್ಲಿರುವ ಜಗಜ್ಯೋತಿ ಬಸವೇಶ್ವರ ಎಪಿಎಂಸಿಯಲ್ಲಿ ಆಯೋಜಿಸಲಾಗಿದ್ದ ಹುಬ್ಬಳ್ಳಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಗತವೈಭವ ಮರುಕಳಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಶತಮಾನದಿಂದ ಈ ಸಂಸ್ಥೆಯನ್ನು ಉಳಿಸಿಕೊಂಡು ಬಂದ ಇದ್ದು, ರೈತರ ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಮಾಡುವಂತೆ ತಿಳಿಸಿದರು.
ಈ ಪ್ರತಿಷ್ಠಿತ ಸಂಸ್ಥೆ ರೈತರ ಆಸ್ತಿ. ಆ ಪ್ರತಿಷ್ಠೆಯನ್ನು ಮತ್ತು ರೈತ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ವಿಶೇಷ ಕಾಳಜಿ, ಮತ್ತು ಮುತುವರ್ಜಿ ವಹಿಸಬೇಕು ಇದರೊಂದಿಗೆ ನಾನು ಸಹ ಈ ಸಂಸ್ಥೆಯ ಜೊತೆ ಇರುವುದಾಗಿ ಮುಖ್ಯಮಂತ್ರಿಯವರು ತಿಳಿಸಿದರು.
ಒಬ್ಬ ವ್ಯಕ್ತಿ 100 ವರ್ಷ ಉಳಿಯಬಹುದು, ಆದರೆ ಒಂದು ಸಂಸ್ಥೆಯನ್ನು 100 ವರ್ಷ ಉಳಿಸಿಕೊಂಡು ಬರುವುದು ಬಹಳ ಕಷ್ಟ. ಇಂದಿನ ಖಾಸಗೀಕರಣ, ಜಾಗತೀಕರಣ ಹಾಗೂ ಆಧುನೀಕರಣ ನಡುವೆಯೂ ಸಹಕಾರಿ ಸಂಸ್ಥೆಯನ್ನು ಉಳಿಸಿಕೊಂಡು ಬಂದಿರುವುದು ಪರಿಶ್ರಮದ ಪರಿಣಾಮ ಎಂದರು.
ರೈತರ ವಿಷಯ ಬಂದಾಗ, ರೈತರ ಸಮಸ್ಯೆ ವಿಷಯ ಬಂದಾಗ ಬೇರೆಲ್ಲವನ್ನು ಮರೆತು ನಾವು ಒಗ್ಗಟಾಗಿ ಕೆಲಸ ಮಾಡೋಣ ಎಂದರು. ಸಂಸ್ಥೆಯ ಬೆಳೆದರೆ ರೈತರಿಗೆ ಅನುಕೂಲವಾಗುವುದು. ಸಂಸ್ಥೆಯಿಂದ ನಾವು-ನಿವೆಲ್ಲರೂ ಬೆಳೆದಿದ್ದೇವೆ, ರಾಜಕೀಯವಾಗಿಯೂ ಬೆಳೆದಿದ್ದೇವೆ. ಈ ಸಂಸ್ಥೆಯನ್ನು ಬೆಳೆಸಲು ನಾವು-ನೀವು ಮರಳಿ ಏನನ್ನಾದರೂ ನೀಡುವ ಚಿಂತನೆಯನ್ನು ಮಾಡಬೇಕಿದೆ ಎಂದರು.
ಇದು ನನ್ನ ಸಂಸ್ಥೆ ಈ ಸಂಸ್ಥೆಗೆ ಸರ್ಕಾರದಿಂದ ನೀಡಬೇಕಾಗಿರುವ ಸಹಾಯ-ಸಹಕಾರವನ್ನು ಸರ್ಕಾರದಿಂದ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಸಂಸ್ಥೆಯವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ