ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ’ಸಮಾಜದಲ್ಲಿ ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗುತ್ತಿದ್ದಂತೆಯೇ ಇತಿಹಾಸ, ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಇಂತಹ ಸನ್ನಿವೇಶದಲ್ಲಿ ನಾಡಿನ ಗತ ವೈಭವದ ಭವ್ಯ ಪರಂಪರೆಯನ್ನು ಯುವ ಜನಾಂಗಕ್ಕೆ ತಿಳಿಸುವ ಅಗತ್ಯವಿದೆ’ ಎಂದು ನಿಡಸೋಶಿ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಆರ್.ಡಿ.ಹೈಸ್ಕೂಲ್ ಮೈದಾನದಲ್ಲಿ ಯಕ್ಸಂಬಾದ ಜೊಲ್ಲೆ ಗ್ರೂಫ್ ನೇತ್ರತ್ವದಲ್ಲಿ ರಂಗಾಯಣ ಧಾರವಾಡದಿಂದ ಹಮ್ಮಿಕೊಂಡಿದ್ದ ’ವೀರರಾಣಿ ಕಿತ್ತೂರು ಚೆನ್ನಮ್ಮ’ ಬೃಹತ್ ನಾಟಕ ಎರಡನೇ ಪ್ರದರ್ಶನವನ್ನು ಸೋಮವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
’ನಾಡಿನಲ್ಲಿ ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮೊದಲಾದ ವೀರವನಿತೆಯರ ನಾಡಪ್ರೇಮ, ತ್ಯಾಗ, ಸಾಹಸವನ್ನು ಯುವ ಜನಾಂಗಕ್ಕೆ ತಿಳಿಸಬೇಕಿದೆರೀ ನಿಟ್ಟಿನಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಬೃಹತ್ ನಾಟಕ ಪ್ರದರ್ಶಸಿಸುತ್ತಿರುವ ರಂಗಾಯಣದ ಕಾರ್ಯ ಶ್ಲಾಘನೀಯವಾಗಿದೆ’ ಎಂದರು.
ಮುಜರಾಯಿ, ಹಜ್ ಮತ್ತು ವಕ್ಪ್ ಸಚಿವೆ ಶಶಿಕಲಾ ಜೊಲ್ಲೆ ಅವರು,’ ಯುವ ಜನಾಂಗದಲ್ಲಿ ದೇಶ ಭಕ್ತಿ, ದೇಶಕ್ಕಾಗಿ ತ್ಯಾಗ, ಬಲಿದಾನಗೈದ ಹೋರಾಟಗಾರರನ್ನು ರಂಗ ಸ್ವರೂಪದ ಮೂಲಕ ಪರಿಚಯಿಸಿದರೆ ಮನದಟ್ಟಾಗುತ್ತದೆ. ಈ ನಿಟ್ಟಿನಲ್ಲಿ ರಂಗಾಯಣದಿಂದ ಕಿತ್ತೂರು ರಾಣಿ ಚೆನ್ನಮ್ಮ ನಾಟಕ ಪ್ರದರ್ಶಿಸಲಾಗುತ್ತಿದ್ದು, ನಿಪ್ಪಾಣಿ ಪಟ್ಟಣದಲ್ಲೂ ಫೆ.೪ ಮತ್ತು ೫ ರಂದು ಇದೇ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಿಸಬೇಕು’ ಎಂದರು.
ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ, ’ ನಾಟಕ ಪ್ರದರ್ಶನಕ್ಕೆ ಸೂಕ್ತ ಸಹಾಯ ಸಹಕಾರ ನೀಡಿದ ಜೊಲ್ಲೆ ಗ್ರೂಪ್‌ಗೆ ಅಭಿನಂದನೆ ಸಲ್ಲಿಸಿದರು. ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿಯ ಸಂಪಾದನ ಸ್ವಾಮೀಜಿ, ಬಾವಾನಸೌಂದತ್ತಿಯ ಶಿವಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಜೊಲ್ಲೆ ಗ್ರೂಫ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು.. ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ವಿಜಯ ಮಾಂಜರೇಕರ, ಕಿರಣ ಕುಲಕರ್ಣಿ, ಬಿ.ಎ.ಪಾಟೀಲ, ಪ್ರಕಾಶ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು. ರಮೇಶ ಪಾಟೀಲ ನಿರೂಪಿಸಿದರು.
*ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ; ಕ್ರಿಯಾಯೋಜನೆ ಸಲ್ಲಿಸಲು ಸಿಎಂ ಬೊಮ್ಮಾಯಿ ಸೂಚನೆ*
https://pragati.taskdun.com/gadinada-chetanastate-awardcm-basavaraj-bommai100-crore-for-border-development-authority-action-plan/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ