
ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ಶ್ರೀನಿವಾಸ ದೀಕ್ಷಿತಲು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ 73 ವರ್ಷದ ದೀಕ್ಷಿತಲು ಅವರನ್ನು ತಿರುಪತಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ದೀಕ್ಷಿತಲು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಸಂದರ್ಭದಲ್ಲಿ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಇದೀಗ ವರದಿ ಬಂದಿದೆ. ವರದಿಯಲ್ಲಿ ಕೊವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ.
ಕೊರೊನಾ ಆತಂಕದ ನಡುವೆಯೂ ತಿರುಮಲ ತಿರುಪತಿಯಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದುವರೆಗೂ 140 ಮಂದಿ ಟಿಟಿಡಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಉಳಿದಂತೆ ಲಡ್ಡು ಮಾಡುವ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 14 ಮಂದಿ ಸಹಾಯಕ ಅರ್ಚಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 140 ಮಂದಿ ಸೋಂಕಿತರಲ್ಲಿ ಇದುವರೆಗೂ ಕೊರೊನಾಗೆ ಚಿಕಿತ್ಸೆ ಪಡೆದುಕೊಂಡು 70 ಮಂದಿ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.