*ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಸಾವು*

ಪ್ರಗತಿವಾಹಿನಿ ಸುದ್ದಿ : ಬೆಳಗಾವಿಯ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳು ಸಾವನ್ನಪ್ಪಿದ ಪ್ರಕರಣ ಮಾಸುವ ಮುನ್ನವೆ ದಾವಣಗೆರೆಯ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ 4 ಚುಕ್ಕೆ ಜಿಂಕೆಗಳು ಸಾವನ್ನಪ್ಪಿವೆ.
ಹೆಮರಾಜಿಕ್ ಸೆಪ್ಪಿಸೆಮಿಯಾ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಜಿಂಕೆಗಳು ಸಾವನ್ನಪ್ಪಿರುವಂತಹ ಶಂಕೆ ವ್ಯಕ್ತವಾಗಿದೆ. ಸದ್ಯ ಉಳಿದ ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ.ಸದ್ಯ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ಜನವರಿ 16 ರಂದು ಒಂದು ಚುಕ್ಕೆ ಜಿಂಕೆ ಸಾವನ್ನಪ್ಪಿತ್ತು. ಮರುದಿನ ಮತ್ತೆರಡು ಜಿಂಕೆಗಳು ಮೃತಪಟ್ಟಿದ್ದು ಈವರೆಗೆ ಒಟ್ಟು ನಾಲ್ಕು ಜಿಂಕೆಗಳು ಸಾವನ್ನಪ್ಪಿವೆ.
ಸದ್ಯ ಮೃಗಾಲಯದಲ್ಲಿ 94 ಹೆಣ್ಣು 58 ಗಂಡು ಹಾಗೂ 18 ಮರಿಗಳು ಸೇರಿದಂತೆ ಒಟ್ಟು 170 ಚುಕ್ಕೆ ಜಿಂಕೆಗಳಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರ ವೀಕ್ಷಣೆಗೆ ನಿಷೇಧಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸೋಂಕು ವ್ಯಾಪಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ವೈದ್ಯರು ಇತರೆ ಪ್ರಾಣಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ.



