Kannada NewsKarnataka News

ಕೆಎಲ್ಇ ಆಸ್ಪತ್ರೆಯಿಂದ ಉಚಿತ ಅಂಬುಲೆನ್ಸ್ ವ್ಯವಸ್ಥೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಹಾಗೂ ಜನರಲ್ಲಿ ಹೆದರಿಕೆ ಭಾವನೆಯನ್ನು ಹುಟ್ಟು ಹಾಕಿ ಮುನ್ನುಗ್ಗುತ್ತಿರುವ ಕೊರೊನಾ ವೈರಸ್ ಕೊವಿಡ್ -೧೯ ಅನ್ನು ಎದುರಿಸಲು ಕೆಎಲ್‌ಇ ಸಂಸ್ಥೆಯು ಈಗಾಗಲೇ ಒಂದು ಹೆಜ್ಜೆ ಮುಂಟಿದ್ದು, ಈಗ ಉಚಿತ ಅಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ.

ಕೊರೊನಾ ಸೊಂಕು ಇಲ್ಲದೇ ಇರುವ ವ್ಯಕ್ತಿಯನ್ನು ತುರ್ತು ಚಿಕಿತ್ಸೆ ನೀಡುವುದಕ್ಕಾಗಿ ಆಸ್ಪತ್ರೆಗೆ ದಾಖಲಿಸಲು ಅಂಬುಲನ್ಸ್ ಸೇವೆಯನ್ನು ನೀಡಲಾಗುತ್ತದೆ.
ತುರ್ತು ಸೇವೆಯನ್ನು ಪಡೆದುಕೊಳ್ಳಲು ಆಸ್ಪತ್ರೆಯ ಅಂಬುಲೆನ್ಸ್ ಸೇವೆಯನ್ನು ಪಡೆದುಕೊಳ್ಳಲು ಬಯಸುವವರು ೦೮೩೧-೨೫೫೧೧೪೪ ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

ಡಿಲೆವರಿ (ಹೆರಿಗೆ)ಗೆ ಬರುವ ಮಹಿಳೆಯರು, ತುರ್ತು ಚಿಕಿತ್ಸೆ ಅವಶ್ಯವಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೊಳಗಾಗುವವರನ್ನು ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಬರಲಾಗುವದು. ಔಷಧಗಳನ್ನು ಮನೆಮನೆಗೆ ವಿತರಿಸಲು ಕ್ರಮಕೈಕೊಳ್ಳಲಾಗಿದ್ದು, ದೂರವಾಣಿ ಕರೆ ಮಾಡಿ ವೈದ್ಯರ ಸೂಚನೆಯಂತೆ ಔಷಧಿಗಳ ಪಟ್ಟಿಯನ್ನು ಹೇಳಿದರೆ ಮನೆಬಾಗಿಲಿಗೆ ತಲುಪಿಸಲಾಗುವುದು. ಆಸ್ಪತ್ರೆಯ ವೆಲನೆಸ್ (ಔಷಧ ಅಂಗಡಿ) ಫಾರ‍್ಮಾಸಿ ದೂ.+೯೧ ೭೯೯೬೭೦೫೫೦೧ ಇಲ್ಲಿಗೆ ಕರೆ ಮಾಡಿ. ಅಲ್ಲದೇ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಕೆಎಲ್‌ಇ ವೇಣುದ್ವನಿ ಮೂಲಕ ಕಾರ‍್ಯಕ್ರಮಗಳ ಪ್ರಸಾರ ಮಾಡಲಾಗುತ್ತಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರಿಗಾಗಿ ಮಾನಸಿಕ ತಜ್ಞವೈದ್ಯರನ್ನು ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆ.
ಈಗಾಗಲೇ ಫ್ಲ್ಯು ಕ್ಲಿನಿಕ ಸೇವೆಯಲ್ಲಿ ತೊಡಗಿದ್ದು, ಶೀಘ್ರದಲ್ಲಿಯೇ ಕೋವಿಡ್-೧೯ ತಪಾಸಣಾ ಕೇಂದ್ರವು ಕಾರ‍್ಯಾರಂಭ ಮಾಡಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ತಿಳಿಸಿದರು.

ಈ ಕುರಿತು ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಡಾ. ವಿ ಡಿ ಪಾಟೀಲ, ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ವಿ ಎ ಕೋಠಿವಾಲೆ, ಡಾ. ಮಾಧವ ಪ್ರಭು, ಡಾ. ಬಸವರಾಜ ಬಿಜ್ಜರಗಿ, ಡಾ. ಆರ್ ಎಸ್ ಮುಧೋಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button