
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಇಬ್ಬರು ಸ್ನೇಹಿತರು ವಾಸವಾಗಿದ್ದರು. ಆದರೆ ಹಬ್ಬದ ದಿನ ಮನೆಯಲ್ಲಿ ನಾನ್‌ವೆಜ್ ತಂದು ತಿಂದಿದ್ದಕ್ಕಾಗಿ ಸ್ನೇಹಿತರಿಬ್ಬರ ನಡುವೆ ಗಲಾಟೆ ನಡೆದು ಒಬ್ಬನ ಕೊಲೆ ಆಗಿರುವ ಘಟನೆ ಚಿಕ್ಕಜಾಲದಲ್ಲಿ ನಡೆದಿದೆ.
ಆರೋಪಿಯನ್ನು ಬಿಹಾರ ಮೂಲದ ಶಂಭೂ ಎಂದು ಗುರುತಿಸಲಾಗಿದ್ದು, ಅಸ್ಸಾಂ ಮೂಲದ ರಾಜೇಶ್ ಕೊಲೆಯಾದ ವ್ಯಕ್ತಿ. ಇಬ್ಬರು ಕೂಡಾ ಸ್ನೇಹಿತರಾಗಿದ್ದು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡು, ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ದೀಪಾವಳಿ ಮುಗಿದ ಬಳಿಕ ಛತ್ ಪೂಜೆ ಮಾಡುತ್ತಾರೆ. ಈ ಧರ್ಮಿಕ ಹಬ್ಬದ ಸಂದರ್ಭ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಹೀಗಾಗಿ ಶಂಭೂ ಮನೆಯಲ್ಲಿ ಎರಡು ದಿನ ವಿಶೇಷ ಪೂಜೆ ಮಾಡುತ್ತಿದ್ದು, ನಾನ್ ವೆಜ್ ತರದಂತೆ ರಾಜೇಶ್‌ಗೂ ತಿಳಿಸಿದ್ದ.
ಆದರೆ ಸೋಮವಾರ ಹಬ್ಬದ ಪ್ರಮುಖ ದಿನದಂದೇ ಶಂಭೂ ಪೂಜೆ ಮುಗಿಸಿ ಹೊರಗೆ ಹೋದಾಗ ರಾಜೇಶ್ ಮನೆಗೆ ನಾನ್‌ವೆಜ್ ತಂದು ತಿಂದಿದ್ದಾನೆ. ಈ ವಿಚಾರ ತಿಳಿದ ಶಂಭೂ ರಾಜೇಶ್ ಮೇಲೆ ಹಲ್ಲೆ ಮಾಡಿದ್ದಾನೆ.
ಇದರಿಂದ ರಾಜೇಶ್‌ಗೆ ಗಂಭೀರ ಗಾಯಗಳಾಗಿ ಸಾವನ್ನಪ್ಪಿದ್ದಾನೆ. ಇದೀಗ ಘಟನೆ ಸಂಬಂಧ ಚಿಕ್ಕಜಾಲ ಪೊಲೀಸರ ಪ್ರಕರಣ ದಾಖಲಿಸಿಕೊಂಡು ಆರೋಪಿ ಶಂಭೂನನ್ನು ಬಂಧಿಸಿದ್ದಾರೆ.




