CrimeKannada NewsKarnataka NewsNational

*ಶಾಲಾ ವಾಹನಕ್ಕೆ ಸಿಲುಕಿ 4 ವರ್ಷದ ಬಾಲಕಿ ಸಾವು*

ಪ್ರಗತಿವಾಹಿನಿ ಸುದ್ದಿ: ತಾಯಿ ಎದುರೆ ಶಾಲಾ ವಾಹನಕ್ಕೆ ಸಿಲುಕಿ 4 ವರ್ಷದ ಬಾಲಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಸನಪುರ ಬಳಿ ಈ ಘಟನೆ ನಡೆದಿದೆ. ತನುಶಾ ಮೃತ ಬಾಲಕಿ. ತನುಶಾ, ತುಮಕೂರಿನ ಹೆಬ್ಬೂರು ನಿವಾಸಿಗಳಾಗಿರುವ ಕಿಶೋರ್ ಮತ್ತು ಮಧುಸ್ಮಿತಾ ದಂಪತಿಯ ಎರಡನೇ ಮಗು ಎನ್ನಲಾಗಿದೆ. ಬಾಲಕಿ ಬಲಿ ಪಡೆದ ವಾಹನ ಕಿಡ್ಸ್​ ಇಂಟರ್​ನ್ಯಾಷನಲ್​ ಶಾಲೆಗೆ ಸೇರಿದ್ದು ಎಂಬುದು ಗೊತ್ತಾಗಿದೆ.

Home add -Advt

ವಾಹನ ರಿವರ್ಸ್​​ ತೆಗೆದುಕೊಳ್ಳುವಾಗ ಅವಘಡ ನಡೆದಿದ್ದು, ಬಾಲಕಿ ಬಸ್​ನ ಮುಂಭಾಗದ ಚಕ್ರಕ್ಕೆ ಸಿಲುಕಿ ದುರ್ಮರಣ ಹೊಂದಿದ್ದಾಳೆ. ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ಶಾಂತಿನಗರದ ಆರ್​​ಟಿಒದಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್, ಮಧ್ಯಾಹ್ನ ಈಕೆಯನ್ನು ಶಾಲೆಯಿಂದ ಕರೆತಂದಿದ್ದರು. ಆ ಬಳಿಕ ಸಂಜೆ ಮೊದಲ ಮಗಳು ಹನಿಕಾ ಕೂಡ ಶಾಲೆಯಿಂದ ಬರಲಿರುವ ಕಾರಣ ಆಕೆಯನ್ನು ಕರೆತರಲೆಂದು ತಾಯಿ ಮಧುಸ್ಮಿತಾ ತೆರಳಿದ್ದರು.

ಈ ವೇಳೆ ತನುಶಾಳನ್ನು ಸಹ ಅವರು ಕರೆದೊಯ್ದಿದ್ದರು. ಆದರೆ ದುರ್ದೈವ ಎಂಬಂತೆ ಹನಿಕಾಳನ್ನ ಕರೆತರುವಷ್ಟರಲ್ಲಿ ಅಲ್ಲೇ ಆಡಲು ಶುರುಮಾಡಿದ್ದ ಬಾಲಕಿಯ ಮೇಲೆ ಶಾಲಾ ಬಸ್​​ ಹರಿದಿದೆ. ಪರಿಣಾಮ ತಾಯಿಯ ಕಣ್ಣೆದುರೇ ತನುಶಾ ಉಸಿರು ಚೆಲ್ಲಿದ್ದಾಳೆ.

ಇನ್ನು ಅಪಘಾತದ ಬೆನ್ನಲ್ಲೇ ಶಾಲಾ ಬಸ್​​ನ ಚಾಲಕ ಸ್ಥಳದಿಂದ ಎಸ್ಕೇಪ್​​ ಆಗಿದ್ದು, ಮೃತ ಬಾಲಕಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಾಣಾವರ ಸಂಚಾರಿ ಪೊಲೀಸರೂ ಸ್ಥಳಕ್ಕೆ ಭೇಟಿ ಕೊಟ್ಟಿದ್ದು, ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಕಾಗಿ ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿದೆ. 

Related Articles

Back to top button