ಕಾನೂನು ಸಲಹೆ ಪಡೆದು ಹೊಸ ನಿಯಮ -ಅಲ್ಲಿಯವರೆಗೂ ಹಳೆಯ ದಂಡ ಅನ್ವಯ
ಪ್ರಗತಿವಾಹಿನಿಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾಹಿತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೇಶದಲ್ಲಿ ಜಾರಿಯಾಗಿರುವ ಹೊಸ ಸಂಚಾರ ನಿಯಮ ಭಾರೀ ವಿರೋಧಕ್ಕೆ ಕಾರಣವಾಗಿದೆ. ಪೊಲೀಸರು ಮತ್ತು ವಾಹನ ಸವಾರರ ಮಧ್ಯೆ ಘರ್ಷಣೆಗೂ ಅವಕಾಶವಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ದಂಡ ಇರುವುದರಿಂದ ವಾಹನ ಮಾಲಿಕರು ಕಂಗೆಟ್ಟು ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಬದಲಾವಣೆ ಮಾಡುವುದಾಗಿ ಸಾರಿಗೆ ಸಚಿವ ಲಕ್ಷಮಣ ಸವದಿ ಕಳೆದವಾರ ತಿಳಿಸಿದ್ದರು. ನಿಯಮ ಬದಲಾವಣೆಗೆ ರಾಜ್ಯ ಸರಕಾರಕ್ಕೆ ಅಧಿಕಾರವಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡಕರಿ ತಿಳಿಸಿದ್ದರು. ಹಾಗಾಗಿ ಗುಜರಾತ್ ನಲ್ಲಿ ಮಾಡಿರುವ ಬದಲಾವಣೆಯನ್ನು ಗಮನಿಸಿ ರಾಜ್ಯದಲ್ಲೂ ಬದಲಾವಣೆ ಮಾಡಲು ಸರಕಾರ ಮುಂದಾಗಿದೆ.
ಈ ಬಗ್ಗೆ ಈಗಷ್ಟೆ, ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರಗತಿವಾಹಿನಿ ಜೊತೆ ಮಾತನಾಡಿದ್ದಾರೆ. ಗುಜರಾತ್ ನಲ್ಲಿ ನಿನ್ನೆಯಷ್ಟೆ ಹೊಸ ನಿಯಮಕ್ಕೆ ತಂದಿರುವ ಬದಲಾವಣೆಯ ನೋಟಿಫಿಕೇಶನ್ ಹೊರಡಿಸಲಾಗಿದೆ. ಅದನ್ನು ನಮಗೂ ಕಳುಹಿಸಲು ಹೇಳಿದ್ದೇವೆ. ಇಂದು ಸಂಜೆಯೊಳಗೆ ಅದು ನಮಗೆ ಸಿಗಬಹುದು. ಅದನ್ನು ಕಾನೂನು ತಜ್ಞರಿಗೆ ಕಳುಹಿಸಲಾಗುವುದು. ಅವರ ಸಲಹೆ ಪಡೆದು ಕರ್ನಾಟಕದಲ್ಲಿ ಯಾವರೀತಿ ಬದಲಾವಣೆ ಮಾಡಬೇಕೆನ್ನುವ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸವದಿ ತಿಳಿಸಿದರು.
ಸಧ್ಯಕ್ಕೆ ಹಳೆಯ ನಿಯಮ
ಕೇಂದ್ರ ಸರಕಾರ ತಂದಿರುವ ಹೊಸ ನಿಯಮದಲ್ಲಿ ಎಲ್ಲವನ್ನೂ ಬದಲಾವಣೆ ಮಾಡಲು ಅವಕಾಶವಿಲ್ಲ. ಕೆಲವು ಮಾದರಿಯ ದಂಡಗಳಿಗಷ್ಟೆ ಬದಲಾವಣೆ ಮಾಡಲು ಅವಕಾಶವಿದೆ. ಅದನ್ನು ಪರಿಶೀಲಿಸಲಾಗುವುದು. ಕೆಲವು ಉದ್ದೇಶಪೂರ್ವಕವಾಗಿ ಮಾಡುವ ತಪ್ಪುಗಳಿಗೆ ದಂಡ ಕಡಿಮೆ ಮಾಡುವ ಪ್ರಶ್ನೆ ಇಲ್ಲ. ಎಲ್ಲವನ್ನೂ ಪರಿಶೀಲಿಸಿ ಹೊಸ ನಿಯಮ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.
ಹೊಸ ನಿಯಮ ತಿದ್ದುಪಡಿ ಜಾರಿಗೆ ಬರುವವರೆಗೆ ಹಳೆಯ ನಿಯಮವನ್ನೇ ಜಾರಿಮಾಡಲು ಪೊಲೀಸರಿಗೆ ಮೌಖಿಕವಾಗಿ ತಿಳಿಸಲಾಗಿದೆ. ಹೊಸ ನಿಯಮದಂತೆ ದೊಡ್ಡ ಪ್ರಮಾಣದ ದಂಡ ವಿಧಿಸದಂತೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಇನ್ನು 2-3 ದಿನದಲ್ಲೇ ಹೊಸ ನಿಯಮ ಜಾರಿಗೊಳಿಸಲು ಸಾಧ್ಯವಾಗಬಹುದು ಎನ್ನುವ ಇಂಗಿತವನ್ನು ಸವದಿ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ