*ತಾಯಿಯಿಲ್ಲದ ಬಾಲಕಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಹಿಂಸಿಸಿದ ಪ್ರಕರಣ; ದೊಡ್ಡಮ್ಮ ಹಾಗೂ ಆಕೆ ಮಗನ ವಿರುದ್ಧ FIR ದಾಖಲು*
ಪ್ರಗತಿವಾಹಿನಿ ಸುದ್ದಿ: ತಾಯಿಯಿಲ್ಲದ ಬಾಲಕಿಗೆ ದೊಡ್ಡಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ದೊಡ್ದಮ್ಮ ಹಾಗೂ ಆಕೆಯ ಮಗನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ಬಾಲಕಿಯನ್ನು ಆಕೆಯ ದೊಡ್ದಮ್ಮ ನಿಡಗಟ್ಟೆ ಮನೆಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದರು. ಬಾಲಕಿ ಲಕ್ಷ್ಮೀಗೆ ತಾಯಿ ಇರಲಿಲ್ಲ. ಬಾಲಕಿ ಹೆಸರಲ್ಲಿ ಆಕೆಯ ತಾಯಿ ಸಾವಿಗೂ ಮುನ್ನ 4 ಲಕ್ಷ ಹಣ ಇಟ್ಟಿದ್ದರಂತೆ. ಆ ಹಣದ ಮೇಲೆ ಬಾಲಕಿಯ ದೊಡ್ದಮ್ಮನಿಗೆ ಕಣ್ಣು. ಹಣದ ಆಸೆಗಾಗಿ ಬಾಲಕಿಯನ್ನು ಕರೆದೊಯ್ದು ಚೆಕ್ ಗೆ ಸಹಿ ಹಾಕುವಂತೆ ಬಲವಂತಮಾಡಿದ್ದ ದೊಡ್ಡಮ್ಮ ಹಲ್ಲೆ ನಡೆಸಿದ್ದಾರೆ. ಬಾಲಕಿ ಚೆಕ್ ಗೆ ಸಹಿ ಮಾಡಲು ನಿರಾಕರಿಸಿದಾಗ ಇಸ್ತ್ರಿ ಪೆಟ್ಟಿಗೆಯಿಂದ ಬಾಲಕಿ ತೊಡೆಯನ್ನು ಸುಟ್ಟು ಚಿತ್ರಹಿಂಸೆ ನೀಡಿದ್ದರು.
ದೊಡ್ಡಮ್ಮ ನಂಜಮ್ಮ ಹಾಗೂ ಆಕೆಯ ಮಗ ಬಸವರಾಜ್ ಬಾಲಕಿಯ ಕೈಕಾಲು ಕಟ್ಟಿ, ಬಾಯಿ ಮುಚ್ಚಿ ತೊಡೆಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಅಮಾನುಷವಾಗಿ ನಡೆದುಕೊಂಡಿದ್ದಾರೆ. ಬಾಲಕಿ ಪರೀಕ್ಷೆ ಬರೆಯಲು ಶಾಲೆಗೆ ಬಾರದಿದ್ದಾಗ ಶಿಕ್ಷಕರೊಬ್ಬರು ಬಾಲಕಿ ಮನೆಗೆ ಬಂದು ವಿಚಾರಿಸಿದ್ದಾರೆ. ಬಾಲಕಿಯ ಶೈಕ್ಷಣಿಕ ಭವಿಷ್ಯ ಹಾಳಾಗುತ್ತದೆ ಪರೀಕ್ಷೆಗೆ ಕಳುಹಿಸುವಂತೆ ಕೇಳಿದಾಗ ಬಾಲಕಿ ನಡೆದ ವಿಷಯ ಬಾಯ್ಬಿಟ್ಟಿದ್ದಾಳೆ. ಇದರಿಂದ ದೊಡ್ಡಮ್ಮನ ಕ್ರೂರತೆ ಬೆಳಕಿಗೆ ಬಂದಿದೆ.
5ನೇ ತರಗತಿ ಓದುತ್ತಿದ್ದ ಬಾಲಕಿ ಲಕ್ಷ್ಮೀ ನೀಡಿದ ದೂರಿನ ಮೇರೆಗೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬಡವನಹಳ್ಳಿ ಠಾಣೆಯಲ್ಲಿ ಬಾಲಕಿ ದೊಡ್ಡಮ್ಮ ನಂಜಮ್ಮ ಹಾಗೂ ಆಕೆ ಮಗ ಬಸವರಾಜ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಐಪಿಸಿ ಸೆಕ್ಷನ್ 323, 324, 504, 506, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ