Belagavi NewsBelgaum NewsKannada NewsKarnataka NewsLatest

*42 ಗಂಟೆಗಳ ಅದ್ದೂರಿ ಗಣೇಶ ವಿಸರ್ಜನೆ: ಬೆಳಗಾವಿಯಲ್ಲಿ ಐತಿಹಾಸಿಕ ಗಣೇಶೋತ್ಸವಕ್ಕೆ ತೆರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಈ ಬಾರಿಯ ಗಣೇಶೋತ್ಸವ ಅದ್ದೂರಿಯಾಗಿ ಹಾಗೂ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಸತತ ಸುಮಾರು 42 ಗಂಟೆಗಳ ಕಾಲ ಹಗಲು-ರಾತ್ರಿ ಎನ್ನದೆ ನಡೆದ ಗಣೇಶ ವಿಸರ್ಜನಾ ಮೆರವಣಿಗೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. 

ಬೆಳಗಾವಿ ನಗರದ ಪ್ರಮುಖ ರಸ್ತೆಗಳು ಜನಸಾಗರದಿಂದ ತುಂಬಿ ತುಳುಕಿದವು. ವಿಶೇಷವಾಗಿ ಕಪಿಲೇಶ್ವರ ಹೊಂಡದಲ್ಲಿ ನಡೆದ ವಿಸರ್ಜನಾ ಕಾರ್ಯಕ್ರಮ ಭಕ್ತಿಭಾವದ ಕೇಂದ್ರಬಿಂದುವಾಗಿತ್ತು. ಚವ್ಹಾಟ ಗಲ್ಲಿಯ ಸಾರ್ವಜನಿಕ ಶ್ರೀ ಗಣೇಶ ಮಂಡಳದ ಆರಾಧ್ಯ ದೈವ ‘ಬೆಳಗಾವಿ ರಾಜಾ’ ಮೂರ್ತಿಯ ಅಂತಿಮ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸಿದ್ದರು. ‘ಗಣಪತಿ ಬಪ್ಪಾ ಮೋರಯಾ’, ‘ಮುಂದಿನ ವರ್ಷ ಬೇಗ ಬಾ’ ಎಂಬ ಘೋಷಣೆಗಳು ಮುಗಿಲುಮುಟ್ಟಿದ್ದು, ಇಡೀ ನಗರವೇ ಗಣೇಶನ ಭಕ್ತಿಯಲ್ಲಿ ಮಿಂದೆದ್ದಿತು.

ಹಗಲು-ರಾತ್ರಿ ಎನ್ನದೆ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಹಾಗೂ ಆರತಿ ಬೆಳಗಿ ಭಾವುಕವಾಗಿ ಬೀಳ್ಕೊಡುಗೆ ನೀಡಿದರು. ಬೃಹತ್ ಗಾತ್ರದ ಗಣೇಶ ಮೂರ್ತಿಗಳು ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡ ಜನಸಾಗರದ ಹಿನ್ನೆಲೆಯಲ್ಲಿ ವಿಸರ್ಜನಾ ಪ್ರಕ್ರಿಯೆ ನಿರೀಕ್ಷೆಗಿಂತ ಹೆಚ್ಚಿನ ಸಮಯ ತೆಗೆದುಕೊಂಡಿತು.

ಮುಂದಿನ ವರ್ಷಗಳಲ್ಲಿ ಗಣೇಶ ಮೂರ್ತಿಗಳ ಎತ್ತರ ಹಾಗೂ ಮೆರವಣಿಗೆಯ ಸಮಯ ನಿರ್ವಹಣೆಗೆ ಹೆಚ್ಚಿನ ನಿಯಮಗಳನ್ನು ಜಾರಿಗೊಳಿಸುವ ಕುರಿತು ಪೊಲೀಸ್ ಇಲಾಖೆ ಈಗಾಗಲೇ ಸೂಚನೆ ನೀಡಿದೆ.

ಲಕ್ಷಾಂತರ ಜನರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹಗಲು-ರಾತ್ರಿ ನಿರಂತರವಾಗಿ ಕರ್ತವ್ಯ ನಿರ್ವಹಿಸಿದರು. ಗಣೇಶೋತ್ಸವವನ್ನು ಶಾಂತಿಯುತವಾಗಿ ಮುಕ್ತಾಯಗೊಳಿಸಲು ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂತಿಮವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕೃತ ಗಣೇಶ ಮೂರ್ತಿಯ ವಿಸರ್ಜನೆಯೊಂದಿಗೆ ಈ ಬಾರಿಯ ಅದ್ದೂರಿ ಗಣೇಶೋತ್ಸವಕ್ಕೆ ತೆರೆ ಬಿದ್ದಿತು. ಭಕ್ತಿ, ಸಂಭ್ರಮ, ಶಿಸ್ತು ಹಾಗೂ ಜನಸಹಭಾಗಿತ್ವಕ್ಕೆ ಸಾಕ್ಷಿಯಾದ ಬೆಳಗಾವಿಯ ಗಣೇಶೋತ್ಸವ ಮತ್ತೊಂದು ಸ್ಮರಣೀಯ ಅಧ್ಯಾಯವಾಗಿ ಉಳಿಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button