ಗ್ರಾಮ ಪಂಚಾಯತಿಯ ನೂತನ ಕಟ್ಟಡಕ್ಕೆ ಶುಕ್ರವಾರ ಶಂಕುಸ್ಥಾಪನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೊದಗಾ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ನೂತನ ಕಟ್ಟಡಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಕಟ್ಟಡ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಗುಣಮಟ್ಟದಿಂದ ಕೂಡಿರಬೇಕು. ಇಡೀ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಈ ಕಟ್ಟಡ ಸಾಕ್ಷಿಯಾಗಬೇಕು. ಗ್ರಾಮದ ಜನರು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಅಭಿವೃದ್ಧಿಯ ಮಂತ್ರ ಪಠಿಸುವಂತಾಗಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದರು.
ನಾನು ಶಾಸಕಿಯಾದ ನಂತರ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಯಾವರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎನ್ನುವುದು ನಿಮಗೆಲ್ಲ ತಿಳಿದಿದೆ. ನಿಮ್ಮೆಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ನಿಮ್ಮ ಸಹಕಾರದ ನಿರೀಕ್ಷೆಯಲ್ಲಿದ್ದೇನೆ. ಮತ್ತು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಯೋಜನೆಯ ಸಂಕಲ್ಪ ತೊಟ್ಟಿದ್ದೇನೆ ಎಂದು ಹೆಬ್ಬಾಳಕರ್ ಹೇಳಿದರು.
ಇಡೀ ಗ್ರಾಮೀಣ ವಿಧಾನಸಭಾ ಕ್ಷೇತ್ರ ಒಂದು ಕುಟುಂಬದಂತಿದೆ. ಕುಟುಂಬದ ಸದಸ್ಯೆಯಾಗಿ, ನಿಮ್ಮೆಲ್ಲರ ಮನೆಮಗಳಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಎಲ್ಲ ಭಾಗಗಳೂ ಸಮಾನವಾಗಿ ಅಭಿವೃದ್ಧಿಯಾಗಬೇಕು. ಆ ದಿಸೆಯಲ್ಲಿ ನಾನು ಯೋಜನೆ ರೂಪಿಸುತ್ತಿದ್ದೇನೆ. ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಒಟ್ಟಾಗಿ ಇರೋಣ, ಒಟ್ಟಾಗಿ ಮುನ್ನಡೆಯೋಣ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮೊದಗಾ ಮತ್ತು ಹೊನ್ನಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರು, ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ, ಗಂಗಣ್ಣ ಕಲ್ಲೂರ, ಬಸವರಾಜ ಮ್ಯಾಗೋಟಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಉಷಾತಾಯಿ ಪಾಟೀಲ, ಹಿರಿಯರಾದ ಓಮಣ್ಣ ಅಸ್ಟೇಕರ್, ಬರಮಾ ಕಟಬುಗೋಳ, ಬಸವಣ್ಣಿ ಮುಗಳಿ, ಪರುಶರಾಮ ರಾಮಣೆ, ರಕ್ಷಣಾ ವೇದಿಕೆ ಅಧ್ಯಕ್ಷ ಮಹಾದೇವ, ತಳವಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.