ಮುತಗಾ ಗ್ರಾಮ ಒನ್ ಸೆಂಟರ್ ಐಡಿ ಬಳಸಿ ಬೆಳಗಾವಿಯಲ್ಲಿ ಗೃಹಲಕ್ಷ್ಮೀಗೆ ಹಣ ವಸೂಲಿ: ಸೆಂಟರ್ ಮೇಲೆ ದಾಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುತಗಾದ ಗ್ರಾಮ ಒನ್ ಸೆಂಟರ್ ಐಡಿ ಬಳಸಿ ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಸೆಂಟರ್ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಬೀಗ ಹಾಕಿದ್ದಾರೆ.
ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮತ್ತು ತಹಸಿಲ್ದಾರರ ನೇತೃತ್ವದಲ್ಲಿ ದಾಳಿ ನಡೆಯಿತು.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ನೋಂದಣಿ ಕೇಂದ್ರದ ಹೆಸರಿನಲ್ಲಿ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ಚವಾಟಗಲ್ಲಿ, ಹನುಮಾನ ಮಂಗಲ ಕಾರ್ಯಾಲಯದ ಹತ್ತಿರವಿರುವ ಅದೃಶ ಆರ್ ಟಿ ಇವರ ಮಾಲೀಕತ್ವದ ಖಾಸಗಿ ಜನತಾ ಆನ್ ಲೈನ್ ಸೆಂಟರಗೆ ದಾಳಿ ಮಾಡಲಾಯಿತು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಅರ್ಹ ಫಲಾನುಭವಿಗಳ ಉಚಿತವಾಗಿ ನೋಂದಣಿ ಕಾರ್ಯವು ಪ್ರಾರಂಭವಾಗಿದ್ದು, ಆಯ್ಕೆಯಾದ ಸ್ವಯಂ ಸೇವಕರು ಕಡ್ಡಾಯವಾಗಿ ಆನ್ ಲೈನ್ ಮೂಲಕ ದತ್ತಾಂಶ ಗೌಪ್ಯತೆ, ದತ್ತಾಂಶವು ಸುರಕ್ಷತೆ, ದತ್ತಾಂಶವು ದುರುಪಯೋಗ ಪಡಿಸಿಕೊಳ್ಳುವುದಿಲ್ಲವೆಂದು ಹಾಗೂ ಒಂದು ವೇಳೆ ದುರುಪಯೋಗ ಪಡಿಸಿಕೊಂಡರೆ ಅಥವಾ ಸುಳ್ಳು ಮಾಹಿತಿ ನೀಡಿ ನೇಮಕಗೊಂಡಿರುವುದು ಕಂಡು ಬಂದಲ್ಲಿ ನಿಯಮಾನುಸಾರ ಕಾನೂನು ಕ್ರಮಕ್ಕೆ ಒಳಗಾಗಲೂ ಬದ್ಧನಾಗಿರುತ್ತೇನೆಂದು ಪ್ರಮಾಣ ಪತ್ರ ನೀಡಿರುತ್ತಾರೆ.
ಆದರೆ ಮುತಗಾ ಗ್ರಾಮ ಒನ್ ಸೆಂಟರ್ ನ ಕಿರಣ ಚೌಗಲಾ ಎನ್ನುವವರ ಐಡಿ ಬಳಸಿ ಜನತಾ ಆನ್ ಲೈನ್ ಸೆಂಟರ್ ನಲ್ಲಿ ತಲಾ 250 ರೂ. ಪಡೆದು ಗೃಹಲಕ್ಷ್ಮೀ ಯೋಜನೆಗೆ ನೊಂದಣಿ ಮಾಡಲಾಗುತ್ತಿತ್ತು. ಇದೀಗ ಕಾನೂನೂ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ