Kannada NewsLatestNational

*ಹಸುಗಳಿಗೆ ಮೇವು ಹಾಕಲು ಹೋದ ವ್ಯಕ್ತಿ ಮೇಲೆ ಸಿಂಹ ದಾಳಿ*

ಪ್ರಗತಿವಾಹಿನಿ ಸುದ್ದಿ: ಹಸುಗಳಿಗೆ ಮೇವು ಹಾಕಲು ಹೋದ ವ್ಯಕ್ತಿಯೊಬ್ಬರ ಮೇಲೆ ಸಿಂಹ ದಾಳಿ ನಡೆಸಿರುವ ಘಟನೆ ನಡೆದಿದೆ.

ಗುಜರಾತ್‌ನ ಭಾವನಗರದಲ್ಲಿ ಈ ಭಯಾನಕ ಘಟನೆ ನಡೆದಿದೆ. ಸಿಂಹವು ವ್ಯಕ್ತಿಯನ್ನು ನೆಲಕ್ಕೆ ತಳ್ಳಿ, ಕೈಕಾಲುಗಳನ್ನು ಹಿಡಿದುಕೊಂಡಿತ್ತು. ಪ್ರಾಣಾಪಾಯದಿಂದ ಪಾರಾಗಲು ವ್ಯಕ್ತಿ ಸಿಂಹದ ತಲೆ ಸವರಿದ್ದಾನೆ. ಗ್ರಾಮಸ್ಥರ ಸಮಯೋಚಿತ ಕಾರ್ಯಾಚರಣೆಯಿಂದ ಗಾಯಾಳುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಂಹ ವ್ಯಕ್ತಿಯ ಕಾಲು ಮತ್ತು ಕೈಯನ್ನು ತನ್ನ ದವಡೆ ಹಾಗೂ ಪಂಜಗಳ ನಡುವೆ ಬಿಗಿಯಾಗಿ ಕಚ್ಚಿ ಹಿಡಿದುಕೊಂಡಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾವನಗರ ಜಿಲ್ಲೆಯ ಪಲಿತಾನ ತಾಲೂಕಿನ ಗರಾಜಿಯಾ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 8.30 ರ ಸುಮಾರಿಗೆ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ಕಲುಭಾಯ್ ಬೋಘಾಯ್ ಪರ್ಮಾರ್ ಎಂಬುವವರು ತಮ್ಮ ಮನೆಯ ಸಮೀಪ ಹಸುಗಳನ್ನು ಮೇಯಿಸುತ್ತಿದ್ದಾಗ, ಪೊದೆಗಳ ನಡುವಿನಿಂದ ಬಂದ ಸಿಂಹವೊಂದು ಇದ್ದಕ್ಕಿದ್ದಂತೆ ಅವರ ಮೇಲೆ ಎರಗಿದೆ.

ಘಟನೆಯನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ತಕ್ಷಣವೇ ಸಿಂಹವನ್ನು ಸುತ್ತುವರಿದರು. ಪ್ರಾಣಿಯನ್ನು ಹೆದರಿಸಿ ಓಡಿಸಲು ಎಲ್ಲರೂ ಒಟ್ಟಾಗಿ ಜೋರಾಗಿ ಕೂಗುತ್ತಾ, ಹರಸಾಹಸ ಪಟ್ಟರು. ಗ್ರಾಮಸ್ಥರು ಎಷ್ಟೇ ಕೂಗಾಡಿದರೂ ಸಿಂಹವು ಮಾತ್ರ ಕಲುಭಾಯ್ ಅವರನ್ನು ಬಿಡದೆ ಹಾಗೆಯೇ ಹಿಡಿದುಕೊಂಡಿತ್ತು. ಕೊನೆಗೂ ಗ್ರಾಮಸ್ಥರ ತೀವ್ರ ಪ್ರತಿರೋಧದ ನಂತರ ಸಿಂಹವು ಆತನನ್ನು ಬಿಟ್ಟು ಕಾಡಿನ ಕಡೆಗೆ ಓಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button