-ವಿಶ್ವಾಸ ಸೋಹೋನಿ
ಭಾರತೀಯರು ಆಚರಿಸುವ ಎಲ್ಲಾ ಹಬ್ಬ-ಹರಿದಿನಗಳಲ್ಲಿ ಗುರುಪೂರ್ಣಿಮೆಗೆ ತನ್ನದೇ ಆದ ಮಹತ್ವವಿದೆ. ಆಷಾಢ ಮಾಸದ ಹುಣ್ಣಿಮೆಯ ದಿನ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಅಂದು ಗುರುವಂದನೆ, ಗುರುದಕ್ಷಿಣೆ, ಗುರುಪೂಜೆ ಮುಂತಾದ ಕಾರ್ಯಕ್ರಮಗಳು ನಡೆಯುವುದು ಸರ್ವಸಾಮಾನ್ಯ.
ಗುರಿವಿನ ಮಹಿಮೆ ಅಪಾರ:
ಗುರುಬ್ರಹ್ಮಾ ಗುರುವಿಷ್ಣು ಗುರುದೇವೊ ಮಹೇಶ್ವರ:
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮ:
[ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ದೇವನಾದ ಮಹೇಶ್ವರ
ಗುರುವೇ ಸಾಕ್ಷಾತ್ ಪರಬ್ರಹ್ಮ. ಅಂತಹ ಶ್ರೀ ಗುರುವಿಗೆ ನಮಸ್ಕಾರ]
ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಲಾಗಿದೆ.
‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ನಾಣ್ಣುಡಿಯು ಗುರುವಿನ ಮಹತ್ವವನ್ನು ತಿಳಿಸುತ್ತದೆ.
ತಾಯಿಯೇ ಮೊದಲ ಗುರು, ನಂತರ ತಂದೆ, ಶಿಕ್ಷಕ, ಪ್ರಾಧ್ಯಾಪಕರು, ಮಿತ್ರರು, ಸಂಬಂಧಿಕರು ಬರುತ್ತಾರೆ. ಮಾರ್ಗದರ್ಶನ ನೀಡುವವರು ಗುರು ಆಗಿದ್ದಾರೆ. ಜೀವನದಲ್ಲಿ ಯಾವುದೇ ಮಾರ್ಗದರ್ಶನ ನೀಡುವವರನ್ನು ಗುರು ಎಂದು ಹೇಳುತ್ತಾರೆ. ಗುರು ಎಂದರೆ ಯಾರು? ನಮಗೆ ಯಾವುದೋ ಒಂದು ಹೊಸ ವಿದ್ಯೆಯನ್ನು ಕಲಿಸುವವನು, ದಾರಿ ತೋರಿಸುವವನು, ಬುದ್ಧಿ ಹೇಳುವವನು, ಹೀಗೆ ಜಾತಿಗೆ ಒಬ್ಬ, ಕುಲಕ್ಕೆ ಒಬ್ಬ, ಧರ್ಮಕ್ಕೆ ಒಬ್ಬ, ದೇಶಕ್ಕೆ ಒಬ್ಬ, ಗುರು ಇರುವುದು ಸಾಮಾನ್ಯವಾಗಿದೆ.
ಪ್ರಾಚೀನ ಕಾಲದಲ್ಲಿ ಋಷಿ-ಮುನಿಗಳು ಆಶ್ರಮಗಳಲ್ಲಿ ಇದ್ದುಕೊಂಡು ಗುರುಕುಲಗಳನ್ನು ನಡೆಸುತ್ತಿದ್ದರು. ಅಲ್ಲಿ ಅನೇಕ ವರ್ಷಗಳ ಕಾಲ ಗುರುಗಳ ಸೇವೆ ಮಾಡುತ್ತಾ ಎಲ್ಲಾ ರೀತಿಯ ವಿದ್ಯೆಯನ್ನು ಕಲಿಯಬೇಕಾಗಿತ್ತು. ಆದರೆ ಈಗ ಗುರುಕುಲ ಪದ್ಧತಿ ಮಾಯವಾಗಿ ಶಾಲಾ-ಕಾಲೇಜುಗಳಾಗಿ ಪರಿವರ್ತನೆಯಾಗಿದೆ. ಮೊದಲು ಇರುವ ಪವಿತ್ರತೆ ಕಳೆದು ಹೋಗಿದೆ. ಪಾಠ ಹೇಳಿ ಕೊಡುವುದು ಎಷ್ಟೋ ಜನರ ಪಾಲಿಗೆ ಜೀವನೋಪಾಯವಾಗಿದೆ. ಇವತ್ತಿನ ಸಮಯದಲ್ಲಿ ಅಂತಹ ಗುರುಗಳು ಸಿಗುವುದು ತುಂಬಾ ಕಷ್ಟವಾಗಿದೆ.
ನಮ್ಮಲ್ಲಿರುವ ಧಾರ್ಮಿಕ ಮಠಗಳ ಸ್ವಾಮಿಗಳನ್ನು ನಾವು ಗುರುಗಳೆಂದು ಭಾವಿಸುತ್ತೇವೆ. ಮಾನವ ಸಾಂಸಾರಿಕ ಬದುಕಿನ ಜಂಜಾಟ ದಿಂದ ದೂರವಾಗಿ ನೆಮ್ಮದಿ, ಸಮಾಧಾನ, ಶಾಂತಿಯನ್ನು ಪಡೆಯಲು ಆಧ್ಯಾತ್ಮಿಕ ಗುರುಗಳ ಹುಡುಕಾಟದಲ್ಲಿ ಇರುತ್ತಾನೆ.
ಆಧುನಿಕ ಯುಗದಲ್ಲಿ ಮಠಾಧೀಶರು ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ವಿದ್ಯಾದಾನ, ದಾಸೋಹ, ಮುಂತಾದ ಪುಣ್ಯ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಆದರೆ ಅನೇಕ ಮಠಾಧಿಪತಿಗಳು, ಸಾಧು-ಸನ್ಯಾಸಿಗಳು ಜಾತಿ, ಮತಭೇದ, ರಾಜಕಾರಣದಿಂದ ತಮ್ಮ ಮಹಾನತೆ ಮತ್ತು ಪಾವಿತ್ರ್ಯವನ್ನು ಕಳೆದುಕೊಂಡಿದ್ದಾರೆ. ಮಾಟ-ಮಂತ್ರ ದಿಂದ ದಿಕ್ಕು ತಪ್ಪಿಸುವ ಢೋಂಗಿ ಬಾಬಾಗಳು ಅನೇಕರಿದ್ದಾರೆ.
ನಿಜವಾದ ಸದ್ಗುರು ಯಾರು? ಈ ಕಲಿಕಾಲದ ಅಂತ್ಯದಲ್ಲಿ ಸದ್ಗುರುವಿನ ಮಹಿಮೆಯನ್ನು ನಾವು ತಿಳಿದುಕೊಳ್ಳುವುದು ಅತಿ ಆವಶ್ಯಕವಾಗಿದೆ. ಸದ್ಗುರು ಎಂದರೆ ಸತ್ಯಮಾರ್ಗ ಮತ್ತು ಸದ್ಗತಿಯನ್ನು ನೀಡುವವನು. ಆ ಪರಮಾತ್ಮನೇ ಸತ್ಯಂ ಶಿವಂ ಸುಂದರಂ ಆಗಿದ್ದಾನೆ. ಅವನು ನಿರಾಕಾರ, ಅವ್ಯಕ್ತ, ಅಭೋಕ್ತ, ಆಶರೀರಿ, ಅಜನ್ಮ, ಸರ್ವಶಕ್ತಿವಂತನಾಗಿದ್ದಾನೆ. ಸುಖಕರ-ದು:ಖಹರ, ಸರ್ವಶ್ರೇಷ್ಠ, ಮುಕ್ತಿ-ಜೀವನ್ಮುಕ್ತಿದಾತನಾಗಿದ್ದಾನೆ. ಅಮರನಾಥ ಶಿವ ಪರಮಾತ್ಮನು ಸರ್ವ ಆತ್ಮರ ಸದ್ಗುರುವಾಗಿದ್ದಾನೆ. ಸಾಧು-ಸಂತರ ಉದ್ಧಾರಕನಾಗಿದ್ದಾನೆ. ಈ ಕಲಿಯುಗದ ಅಂತಿಮ ಸಮಯದಲ್ಲಿ ಸತ್ಯಜ್ಷಾನವನ್ನು ನೀಡಿ, ಸತ್ಯಮಾರ್ಗವನ್ನು ತೋರಿಸಿ, ಸಂಪೂರ್ಣ ಪವಿತ್ರತೆ, ಸುಖ, ಶಾಂತಿ ನೀಡುತ್ತಿದ್ದಾನೆ. ಗುರುವಾದವನು ದೊಡ್ಡವನು, ಗುರುತರ ಜವಾಬ್ದಾರಿಯುಳ್ಳವನು, ಜ್ಞಾನವುಳ್ಳವನು, ಅಜ್ಞಾನ ಕಳೆಯುವವನು ಎಂದು ಹೇಳಲಾಗುತ್ತದೆ.
ಗುಕಾರಸ್ತ÷್ವಂಧಕಾರಸ್ತು ರುಕಾರಸ್ತೇಜ ಉಚ್ಚತೇ
ಅಂಧಕಾರ ನಿರೋಧತ್ವಾತ್ ಗುರುರಿತ್ಯಭಿ ಧೀಯತೇ.
ಗುಕಾರ ಕತ್ತಲೆಯ ಪ್ರತೀಕ, ರುಕಾರ ಬೆಳಕಿನ ಪ್ರತೀಕ, ಗೊತ್ತಿಲ್ಲದಿರುವುದು, ತಿಳಿಯದಿರುವುದೇ ಅಜ್ಞಾನ. ಇದೇ ಕತ್ತಲು ಅಥವಾ ಅಂಧಕಾರ. ಅರಿವು, ಜ್ಞಾನ, ವಿದ್ಯೆಯೇ ಬೆಳಕು.
ನಮ್ಮೊಳಗಿನ ಅಜ್ಞಾನದ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ ಹೊಡೆದೋಡಿಸುವವನೇ ಗುರು.
ಆದ್ದರಿಂದಲೇ ಭಗವದ್ಗೀತೆಯಲ್ಲಿ ಈ ರೀತಿ ಹೇಳಲಾಗಿದೆ –
ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ (ಅ-4 ಶ್ಲೋ-7)
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ (ಅ-4 ಶ್ಲೋ-8)
( ಲೇಖಕರು –ವಿಶ್ವಾಸ ಸೋಹೋನಿ.
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,
7349632530; 9483937106)
ಸ್ವಾಮೀಜಿಗಳೇ, ನಿಮಗೆ ನಿಮ್ಮ ನಿಜವಾದ ಕರ್ತವ್ಯದ ಬಗ್ಗೆ ನೆನಪು ಮಾಡುತ್ತಾ….
ಧರ್ಮಸಂಸ್ಥಾಪನೆಯ ದೃಷ್ಟಿಯಲ್ಲಿ ಗುರು -ಶಿಷ್ಯ ಪರಂಪರೆಯ ಮಹತ್ವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ