*ಸರ್ಕಾರಿ ನಿವಾಸ ತಕ್ಷಣ ಖಾಲಿ ಮಾಡುವಂತೆ ಮಾಜಿ ಸಚಿವ ಮಹದೇವಪ್ಪಗೆ ಸಚಿವ ಬೈರತಿ ಸುರೇಶ್ ತಾಕೀತು; ಮಾಜಿ ಮಂತ್ರಿಗಳು ಇರುವಾಗಲೇ ನವೀಕರಣ ಆರಂಭ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಹಾಲಿ ಸಚಿವರು ಹಾಗೂ ಮಾಜಿ ಸಚಿವರ ನಡುವೆ ಸರ್ಕಾರಿ ನಿವಾಸದ ವಿಚಾರವಾಗಿ ಸಂಘರ್ಷ ಆರಂಭವಾಗಿದೆ. ಬೆಂಗಳೂರು ನಗರದ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸವನ್ನು ತಕ್ಷಣ ಖಾಲಿ ಮಾಡುವಂತೆ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಬೈರತಿ ಸುರೇಶ್ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕ್ರೆಸೆಂಟ್ ರಸ್ತೆಯ ನಂ.2 ಸರ್ಕಾರಿ ಬಂಗಲೆಯನ್ನು ಮಹದೇವಪ್ಪ ಸಚಿವರಾಗಿದ್ದ ವೇಳೆ ಸರ್ಕಾರದಿಂದ ಅವರಿಗೆ ಹಂಚಿಕೆಯಾಗಿತ್ತು. ಮಹದೇವಪ್ಪ ಅವರು ಈಗ ಸಚಿವ ಸ್ಥಾನದಲ್ಲಿ ಇಲ್ಲವಾದರೂ ಮನೆ ಖಾಲಿ ಮಾಡಲು ಇನ್ನೂ ಸಮಯಾವಕಾಶ ಇರುವುದರಿಂದ ಅದೇ ನಿವಾಸದಲ್ಲಿ ವಾಸವಾಗಿದ್ದಾರೆ. ಆದರೆ ಸಚಿವ ಬೈರತಿ ಸುರೇಶ್ ಇನ್ನೆರಡು ದಿನಗಳಲ್ಲಿ ಮನೆ ಖಾಲಿ ಮಾಡುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಸಚಿವರಿಗೆ ಮನೆ ಖಾಲಿ ಮಾಡಲು 90 ದಿನಗಳ ಕಾಲಾವಕಾಶವಿದೆ. ಹೀಗಿದ್ದರೂ ಮಹದೇವಪ್ಪ ಹಾಗೂ ಅವರ ಕುಟುಂಬದವರು ಮನೆಯಲ್ಲಿ ಇರುವಾಗಲೇ ಬಂಗಲೆಯ ಆವರಣಕ್ಕೆ ಜೆಸಿಬಿ ತರಿಸಿ ಅಲ್ಲಿದ್ದ ಮೀಟಿಂಗ್ ಹಾಲ್ ಅನ್ನು ನೆಲಸಮ ಮಾಡಿಸಲಾಗಿದೆ. ಅಷ್ಟೇ ಅಲ್ಲದೆ ಬೈರತಿ ಸುರೇಶ್ ಅವರ ಸೂಚನೆಯ ಮೇರೆಗೆ ಬಂಗಲೆಗೆ ಪೇಂಟಿಂಗ್ ಹಾಗೂ ನವೀಕರಣ ಕಾರ್ಯಗಳು ಭರದಿಂದ ಸಾಗುತ್ತಿವೆ.
ನಿವಾಸವನ್ನು ಎರಡೇ ದಿನಗಳಲ್ಲಿ ಖಾಲಿ ಮಾಡುವಂತೆ ಸಚಿವ ಬೈರತಿ ಸುರೇಶ್ ಹಾಗೂ ಅವರ ಬೆಂಬಲಿಗರು ಮಹದೇವಪ್ಪ ಅವರ ಮನೆ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಸಚಿವ ಬೈರತಿ ಸುರೇಶ್ ಅವರ ಈ ನಡೆ ಭಾರಿ ಚರ್ಚೆಗೆ ಕಾರಣವಾಗಿದೆ.



