ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರತಿವರ್ಷ ತೋಟಗಾರಿಕಾ ಬೆಳೆ ವ್ಯಾಪ್ತಿ ಹೆಚ್ಚಾಗುತ್ತಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಸಿಗದೆ ರೈತರ ಬದುಕು ಉರಿಯುವ ಬೆಂಕಿಯಲ್ಲಿ ಬಿದ್ದಂತಾಗಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ದೇವೇಗೌಡರು, ರೈತರ ಪಾಲಿಗೆ ಲಾಕ್ ಡೌನ್ ಆತುರದ ನಿರ್ಧಾರದಂತೆ ಕಾಣಿಸುತ್ತದೆ. ವೈರಾಣು ಕಾಣಿಸಿಕೊಂಡಿದ್ದರೂ ಎರಡು ತಿಂಗಳು ಸುಮ್ಮನಿರುವಂತಾಗಿದೆ. ಮುಂದಾಲೋಚನೆ ಇಲ್ಲದೆ ತರಾತುರಿಯಲ್ಲಿ ಲಾಕ್ ಡೌನ್ ತೆಗೆದುಕೊಂಡಂತಾಗಿದೆ. ಇದರಿಂದಾಗಿ ರಾಜ್ಯ ಹಾಗೂ ದೇಶದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ.
ಲಾಕ್ ಡೌನ್ ವೇಳೆ ಗ್ರಾಮ ಮಟ್ಟದಲ್ಲೆ ಹಾಲು ಸಂಗ್ರಹಿಸುವಂತೆ ತರಕಾರಿಯನ್ನು ಸರ್ಕಾರವೇ ಸಂಗ್ರಹಿಸಿ ಮಾರುಕಟ್ಟೆಗೆ ತರಬೇಕಿತ್ತು. ಹಾಪ್ ಕಾಮ್ಸ್, ಸಫಲ್, ನ್ಯಾಪೆಡ್, ಎಪಿಎಂಸಿ ಮೂಲಕ ತರಕಾರಿ ಕೊಳ್ಳುವ ವ್ಯವಸ್ಥೆ ಮಾಡಬೇಕಿತ್ತು. ತರಕಾರಿ ಸಂಗ್ರಹಣೆ ಸಾಗಾಟ, ಮಾರಾಟ ನಿರ್ಬಂಧಿಸಬಾರದು. ಸಂಸ್ಕರಣಾ ಘಟಕಗಳಿಗೆ ಪೂರ್ಣ ವಿನಾಯತಿ ನೀಡಬೇಕು. ದೇಶದ ಯಾವುದೇ ಪ್ರದೇಶಕ್ಕೆ ಅಡೆತಡೆಗಳಿಲ್ಲದೆ ಸಾಗಾಟಕ್ಕೆ ಮತ್ತು ಮಾರಾಟಕ್ಕೆ ಅನುವು ಮಾಡಿಕೊಡಬೇಕು. ತೋಟಗಾರಿಕೆ ಉತ್ಪನ್ನ ಮತ್ತು ಸಂಸ್ಕರಿಸಿದ ಪದಾರ್ಥಗಳ ರಫ್ತಿಗೆ ನಿರ್ಬಂಧ ಇರಬಾರದು ಎಂದು ಮನವಿ ಮಾಡಿದ್ದಾರೆ.
ಅಲ್ಲದೇ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಭಂದ ಇರಕೂಡದು. ತರಕಾರಿ ಮಾರುಕಟ್ಟೆಗೆ ನ್ಯಾಷನಲ್ ಗ್ರಿಡ್ ರಚಿಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಸಲಹೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ