
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಲು ಇಡೀ ರಾಜ್ಯವನ್ನೇ ಮತ್ತೆ ಲಾಕ್ ಡೌನ್ ಮಾಡಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮನವಿಮಾಡಿದ್ದಾರೆ.
ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೆ ತಿಂಗಳು 14ರ ರಾತ್ರಿ 8 ಗಂಟೆ ಯಿಂದ ಲಾಕ್ ಡೌನ್ ಜಾರಿ ಮಾಡಿದೆ ಇದು ಸ್ವಾಗತಾರ್ಹ. ಇದರ ಜೊತೆಗೆ ಇಡಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಬೇಕು ಎಂದು ದೇವೇಗೌಡರು ಹೇಳಿದ್ದಾರೆ.
ರಾಜ್ಯದ ಜನತೆಯ ಜೊತೆಗೆ ನಮ್ಮ ಇಡಿ ದೇಶದ ಜನತೆಗೆ ನಾನು ಮನವಿ ಮಾಡಿಕೊಳ್ಳುತ್ತೇನೆ. ನಮಗೆ ಆರೋಗ್ಯವೇ ಭಾಗ್ಯ. ಆದ್ದರಿಂದ ಮನೆಯಿಂದ ಹೊರ ಹೋಗಬೇಕಾದರೆ ದಯವಿಟ್ಟು ಮಾಸ್ಕ್ ಧರಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಏನೇ ಮುಟ್ಟಬೇಕಾದರೂ ಸ್ಯಾನಿಟೈಸರ್ ನಿಂದ ಕೈ ಅನ್ನು ಸ್ವಚ್ಛಗೊಳಿಸಿ ನಂತರ ಮುಟ್ಟಿ. ಮುಖ್ಯವಾದ ಕೆಲಸ ಕಾರ್ಯಗಳು ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ ಎಂದು ಮನವಿ ಮಾಡಿದ್ದಾರೆ.
ಇನ್ನೊಂದು ಪ್ರಮುಖವಾದ ವಿಷಯ ಈ ಮಹಾಮಾರಿ ವೈರಸ್ಸನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಪ್ಯಾಕೇಜುಗಳನ್ನು ಘೋಷಿಸಿದೆ. ಅದರಲ್ಲಿ ಅವ್ಯವಹಾರ ನಡೆದಿದೆ ಎಂದು ಅನೇಕ ನಾಯಕರುಗಳು ಆಪಾದಿಸುತ್ತಿದ್ದಾರೆ. ಅದೇನೇ ಇದ್ದರೂ ಮುಂಬರುವ ಅಧಿವೇಶನದಲ್ಲಿ ಚರ್ಚೆಮಾಡಲಿ. ಈಗ ನಮಗೆ ಜನತೆಯ ಆರೋಗ್ಯ ಮುಖ್ಯ. ಮೊದಲು ನಾವೆಲ್ಲ ಅದರ ಕಡೆ ಗಮನ ಹರಿಸೋಣ. ಸರ್ಕಾರವು ಸಹ ಇದರ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಾವೆಲ್ಲ ಜೊತೆಗಿದ್ದೀವೆ. ಜನತೆಯ ಆರೋಗ್ಯದ ಜೊತೆ ಚೆಲ್ಲಾಟ ಬೇಡ. ದಯವಿಟ್ಟು ಇನ್ನು ಮುಂದಾದರೂ ಎಚ್ಚೆತ್ತು ಕೆಲಸ ಮಾಡಿ ಎಂದು ಮನವಿ ಮಾಡಿದ್ದಾರೆ.