Latest

‘ಸೋಕಾಲ್ಡ್‌ ಹುಲಿ, ಬಾಹುಬಲಿ‘ ಮುಖ್ಯಮಂತ್ರಿ ಸೀಟಿನ ಮೇಲೆ ; ಯಡಿಯೂರಪ್ಪನವರ ಸ್ವಯಂಕೃತ ಅಪರಾಧವೇ ದುಸ್ಥಿತಿಗೆ ಕಾರಣ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ತಾವು ಖರೀದಿಸಿ ತಂದ ಕುದುರೆಗಳ ಮೇಲೆ ತಾವೇ ಸವಾರಿ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಲೇ ಇರಲಿಲ್ಲ. ಅದರ ಬದಲಿಗೆ ಮಾಧ್ಯಮಗಳು ಬಣ್ಣಿಸುವ ‘ಸೋಕಾಲ್ಡ್‌ ಹುಲಿ, ಬಾಹುಬಲಿ‘ ಮುಂತಾದವರನ್ನು ಮುಖ್ಯಮಂತ್ರಿ ಸೀಟಿನ ಮೇಲೆ ಕೂರಿಸಿದ್ದೇ ಸದ್ಯದ ರಾಜಕೀಯ ದುಸ್ಥಿತಿಗೆ ಕಾರಣ. ಇದು ಯಡಿಯೂರಪ್ಪನವರ ಸ್ವಯಂಕೃತ ಅಪರಾಧ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸಂದಿಗ್ಧತೆಗೆ ಸಿಲುಕಿರುವ ಈ ಹೊತ್ತಿನಲ್ಲಿ ಇದೆಂಥ ರಾಜಕೀಯ? ಈಗ ರಾಜ್ಯದ ಎದುರಿಗೆ ಇರುವುದು ನಾಯಕತ್ವದ ಪ್ರಶ್ನೆಯೋ? ಅಥವಾ ಜನರ ಹಿತದ ಪ್ರಶ್ನೆಯೋ? ರಾಜ್ಯದಲ್ಲಿ ಚಿತೆಗಳಿಗೆ ಹಚ್ಚಿದ ಜ್ವಾಲೆ ಇನ್ನೂ ಆರಿಲ್ಲ. ಅದು ಎಂದು ಆರುತ್ತದೆ ಎಂಬುದೇ ಯಾರಿಗೂ ತಿಳಿಯುತ್ತಿಲ್ಲ. ಇಂಥ ಸಂದರ್ಭದಲ್ಲಿ ಇಂಥ ಕ್ಷುಲ್ಲಕ ರಾಜಕಾರಣ ಅಗತ್ಯವಿದೆಯೇ ಎಂದು ಸರಣಿ ಟ್ವೀಟ್ ಮೂಲಕ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

Home add -Advt

ಇನ್ನೊಂದೆಡೆ, ‘ಅನ್ನ ಹಳಸಿದೆ, *** ಕಾದಿದೆ‘ ಎಂಬಂತೆ ರಾಜ್ಯದ ಮತ್ತೊಂದು ರಾಜಕೀಯ ಪಕ್ಷ ಕಾದು ಕುಳಿತಿದೆ. ರಾಜ್ಯದಲ್ಲಿ ಹೊತ್ತಿರುವ ಚಿತೆಗಳ ಬೆಂಕಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಬೆಂದು ಹೋದರೆ, ನಂತರದ ದಿನಗಳಲ್ಲಿ ತನ್ನನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸಿಕೊಳ್ಳಲು ಆ ರಾಷ್ಟ್ರೀಯ ಪಕ್ಷ ಪ್ರಯತ್ನಗಳನ್ನು ಪೈಪೋಟಿಗೆ ಬಿದ್ದು ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸಂಕಷ್ಟದ ಕಾಲದಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಅಧಿಕಾರದ ಲಾಲಸೆ, ಅದನ್ನು ಬಳಸಿಕೊಂಡು ಅಧಿಕಾರಕ್ಕೆ ಬರಲು ಕೋವಿಡ್‌ ನಿಯಮಗಳನ್ನೆಲ್ಲ ಮೀರಿ ಬೀದಿಗೆಬಿದ್ದಿರುವ ಕಾಂಗ್ರೆಸ್‌ ಪಕ್ಷಗಳೆರಡೂ ಆತ್ಮಾವಲೋಕನೆ ಮಾಡಿಕೊಳ್ಳಬೇಕು. ಸಂಕಷ್ಟದ ಪರಿಸ್ಥಿತಿಯನ್ನೇ ಅಧಿಕಾರಕ್ಕೇರಲು ಏಣಿ ಮಾಡಿಕೊಳ್ಳುತ್ತಿರುವ ಈ ಪಕ್ಷಗಳ ನಡೆಯನ್ನು ಜನ ಗಮನಿಸಬೇಕು ಎಂದು ಹೇಳಿದ್ದಾರೆ.

ಎಸ್.ಎಸ್.ಎಲ್.ಸಿ ಪರೀಕ್ಷೆ ದಿನಾಂಕ ಶೀಘ್ರ ಘೋಷಣೆ

Related Articles

Back to top button