Karnataka NewsLatestPolitics

*ನಿಮ್ಮ ಮುಖದಲ್ಲಿ ಭಯ, ಪಾಪಪ್ರಜ್ಞೆ ಎದ್ದು ಕಾಣುತ್ತಿದೆ ಮುಖ್ಯಮಂತ್ರಿಗಳೇ! ಕುಮಾರಸ್ವಾಮಿ ಲೇವಡಿ*

ಪ್ರಗತಿವಾಹಿನಿ ಸುದ್ದಿ: ಈಗಾಗಲೇ ಭೂಸ್ವಾಧೀನಕ್ಕೆ ನೋಟಿಫಿಕೇಶನ್ ಮಾಡಲ್ಪಟ್ಟ ಮೂರು ಗ್ರಾಮಗಳ ರೈತರು ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ನಾಲ್ಕು ಹಳ್ಳಿಗಳ ಬಡಜನರ ಭೂಮಿ ಕಸಿಯಲು ರಾಜ್ಯ ಸರ್ಕಾರ ನೋಟಿಫಿಕೇಶನ್ ಹೊರಡಿಸಿದ್ದನ್ನು ಪಾಶವೀಕೃತ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು; ಒಂದು ಕಡೆ ಮುಖ್ಯಮಂತ್ರಿಗಳು ಮಾಧ್ಯಮಗೋಷ್ಠಿ ನಡೆಸಿ ನಾಟಕವಾಡುತ್ತಿದ್ದರೆ, ಮತ್ತೊಂದು ಕಡೆ ಗುಟ್ಟು ಗುಟ್ಟಾಗಿ ನಾಲ್ಕು ಗ್ರಾಮಗಳ ರೈತರನ್ನು ಶಾಶ್ವತವಾಗಿ ಒಕ್ಕಲೆಬ್ಬಿಸಲು ಅಧಿಸೂಚನೆ ಹೊರಡಿಸಿರುವುದು ಅಮಾನವೀಯ ಮತ್ತು ಖಂಡನೀಯ ಎಂದು ಕಿಡಿಕಾರಿದರು.

ಬಲವಂತವಾಗಿ ಯಾರಿಂದಲೂ ಭೂಮಿ ಪಡೆಯುವುದಿಲ್ಲ ಎಂದು ಹೇಳುತ್ತೀರಿ, ಎರಡು ತಿಂಗಳು ಕಾಯುತ್ತೇನೆ, ಸಮಿತಿ ಮಾಡುತ್ತೇನೆ ಎಂದೆಲ್ಲಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತೀರಿ! ಇನ್ನೊಂದು ಕಡೆ ಹೊಸದಾಗಿ ನೋಟಿಫಿಕೇಷನ್ ಹೊರಡಿಸಿ ರೈತರ ಭೂಮಿ ಲೂಟಿ ಹೊಡೆಯಲು ಹೊರಟಿದ್ದೀರಿ. ಅದನ್ನು ಮೊದಲೇ ತಿಳಿದವರಂತೆ ನಿಮ್ಮ ಕಡೆಯವರು ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ! ರಾಜ್ಯದಲ್ಲಿ ಏನು ಮಾಡುತ್ತಿದ್ದೀರಿ? ಇದೆಲ್ಲವನ್ನೂ ಯಾರಿಗಾಗಿ ಮಾಡುತ್ತಿದ್ದೀರಿ? ಯಾರಾದರೂ ಇದನ್ನು ಮನುಷ್ಯತ್ವ, ಮಾನವೀಯತೆ ಎಂದು ಕರೆಯುತ್ತಾರಾ? ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಸಮಿತಿ ಮಾಡುತ್ತೇವೆ ಎಂದು ಹೇಳಿ ಮೂರು ನಾಲ್ಕು ಗ್ರಾಮಗಳನ್ನು ನುಂಗಲಿಕೆ ಅಧಿಸೂಚನೆ ಹೊರಡಿಸಿದ್ದೀರಿ! ಬಿಡದಿಯಲ್ಲಿ ನಿನ್ನೆ ರಾತ್ರಿ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಿದ್ದು ಯಾರು? ಇದೆಲ್ಲವನ್ನು ಸ್ವಲ್ಪ ಸ್ವಲ್ಪ ಬಿಡಿಸಿ, ಜನರ ಮುಂದೆ ಇಡಪ್ಪ ಎಂದು ಸಚಿವ ಕುಮಾರಸ್ವಾಮಿ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

Home add -Advt

ಜನರು ಈಗ ಕೆರಳಿ ನಿಂತಿದ್ದಾರೆ. ನಿಮ್ಮ ಗ್ರಹಚಾರ ಬಿಡಿಸಲು ರೆಡಿಯಾಗಿದ್ದಾರೆ. ತಮ್ಮ ಒಪ್ಪಿಗೆ ಇಲ್ಲದೆ ಅವರ ಜಮೀನು ಜಂಟಿ ಮಾಪನ ಮಾಡಲು ಹೋದರೆ ಮಹಿಳೆಯರು ಸುಮ್ಮನೆ ಇರುತ್ತಾರೆಯೇ? ಕೈಗೆ ಪೊರಕೆಯೂ ಬರುತ್ತದೆ, ಇನ್ನೊಂದು ಕೂಡ ಬರುತ್ತದೆ. ‘ಬನ್ನಿ, ಬೇಕಾದರೆ ನನ್ನನ್ನು ಪೊರಕೆಯಲ್ಲಿ ಹೊಡೆಯಿರಿ’ ಎಂದು ಮುಖ್ಯಮಂತ್ರಿ ಹೇಳುತ್ತಾರೆ! ಒಬ್ಬ ಮುಖ್ಯಮಂತ್ರಿ ಬಾಯಲ್ಲಿ ಬರುವ ಮಾತೇ ಇದು? ಎಲ್ಲಿಗೆ ಬಂತು ನೋಡಿ ಕರ್ನಾಟಕದ ಸ್ಥಿತಿ ಎಂದು ಕೇಂದ್ರ ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದರು.

ಬೇಡ ಎಂದಾದರೆ ಯೋಜನೆಯನ್ನು ಕೈಬಿಡಿ:

ಬಿಡದಿ ಉಪನಗರ ಯೋಜನೆ ನನಗೆ ಅಗತ್ಯವಿಲ್ಲ, ಇದು ನನ್ನ ಯೋಜನೆಯಲ್ಲ ಎಂದು ಹೇಳುತ್ತಿದ್ದೀರಿ. ಹಾಗಿದ್ದ ಮೇಲೆ ಅದನ್ನು ಏಕೆ ಇನ್ನೂ ಮುಂದುವರಿಸುತ್ತಿದ್ದೀರಿ, ತಕ್ಷಣವೇ ಕೈ ಬಿಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದರು.

ಕುಮಾರಸ್ವಾಮಿ ಅವರು ಮಾಡಿದ್ದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದು ಹೇಳುವುದಕ್ಕೆ ಆತ್ಮಸಾಕ್ಷಿ ಹೇಗೆ ಬರುತ್ತದೆ? ಇದೇ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ರೈತರು ಟೌನ್ಷಿಪ್ ಯೋಜನೆ ಬೇಡ ಎಂದು ಒತ್ತಾಯಿಸಿದ ಕಾರಣಕ್ಕೆ ನಾನು ಆ ಇಡೀ ಯೋಜನೆಯನ್ನೇ ರದ್ದು ಮಾಡಿದ್ದೇನೆ. ಅದರ ಬಗ್ಗೆ ವಿಧಾನ ಕಲಾಪದಲ್ಲಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಬಹಿರಂಗವಾಗಿ ಘೋಷಣೆ ಮಾಡಿದ್ದೇನೆ. ಈ ವಿಷಯ ಈ ಮುಖ್ಯಮಂತ್ರಿಗೆ ಗೊತ್ತಿಲ್ಲವೇ? ಪಾಪ.. ಅಂತಹ ಮಾಹಿತಿ ಅವರಿಗೆ ಬೇಕಾಗುವುದಿಲ್ಲ, ರುಚಿಸುವುದೂ ಇಲ್ಲ ಎಂದು ಟಾಂಗ್ ನೀಡಿದರು.

ಈ ಯೋಜನೆ ಬೇಡ ರೈತರು ಹೇಳುತ್ತಿದ್ದಾರೆ. ಅವರಿಗೆ ದನಿಯಾಗಿ ನಾನು ಕೂಡ ಬೇಡ ಎನ್ನುತ್ತಿದ್ದೇನೆ. ಹೀಗಾಗಿ ಯಾರಿಗೂ ಬೇಡದ ಯೋಜನೆಯನ್ನು ಜಾರಿಗೆ ತರಲು ಯಾಕೆ ಇಷ್ಟೊಂದು ಹಠ ಮಾಡುತ್ತಿದ್ದೀರಿ? ಇಷ್ಟು ಹಠ ಮಾಡಲು ಇದರೊಳಗೆ ಯಾರ ಹಿತಾಸಕ್ತಿ ಅಡಗಿದೆ ಎಂದು ಕೇಂದ್ರ ಸಚಿವರು ನೇರವಾಗಿಯೇ ಪ್ರಶ್ನಿಸಿದರು.

ನನಗೆ ಈ ಯೋಜನೆ ಅವಶ್ಯಕತೆ ಇಲ್ಲ ಎಂದಿರುವ ಮುಖ್ಯಮಂತ್ರಿ, ಯಾಕೆ ಈ ಯೋಜನೆಗೆ ಕೈ ಹಾಕಿದ್ದಾರೆ? ಯಾರಿಗಾಗಿ, ಯಾವ ಉದ್ದೇಶಕ್ಕಾಗಿ ಬಿಡದಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಅವರು ಹೇಳಿದ ಹಾಗೆ ಜನರೇನು ದಡ್ಡರಲ್ಲ. ಜನರಿಗೆ ಎಲ್ಲಾ ಒಳಸುಳಿಗಳು ಅರ್ಥವಾಗುತ್ತಿವೆ. ಉಪನಗರ ನೆಪದಲ್ಲಿ ತಮ್ಮಿಂದ ಕಿತ್ತುಕೊಳ್ಳುವ ಜಮೀನು ಕೊನೆಗೆ ಯಾರ ಪಾಲಾಗುತ್ತದೆ ಎಂಬುದು ಕೂಡ ರೈತರಿಗೆ ತಿಳಿಯುತ್ತಿದೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಮುಖ್ಯಮಂತ್ರಿ ಮಾಡುತ್ತಿರುವುದು ಮಹಾ ಪಾಪ. ಅದಕ್ಕೆ ನನ್ನನ್ನು ಅಣ್ಣ ಮಾಡಿಕೊಳ್ಳುವುದು ಬೇಡ. ಜನರೇ ಈ ಯೋಜನೆಯನ್ನು ಬೇಡ ಎನ್ನುತ್ತಿದ್ದಾರೆ. ಹೀಗಾಗಿ ಅದನ್ನು ಕೈ ಬಿಡಿ ಎಂದಷ್ಟೇ ನಾನು ಒತ್ತಾಯ ಮಾಡುತ್ತಿದ್ದೇನೆ ಎಂದು ಸಚಿವರು ಹೇಳಿದರು.

ನೊಂದ ರೈತರನ್ನು ಏಜೆಂಟುಗಳೆಂದು ಎಂದು ಕರೆಯಬೇಡಿ. ಹಾಗೆ ಕರೆಯುವುದು ರೈತರಿಗೆ ನೀವು ಮಾಡುವ ಅವಮಾನ. ಎಂ.ಬಿ.ಪಾಟೀಲ್ ಅವರು ಕೈಗಾರಿಕಾ ಸಚಿವರಾಗಿದ್ದರು, ಹಾಗಾದರೆ ಅವರು ಯಾವ ಎಜೆಂಟ್ ಗಳನ್ನು ಇಟ್ಟುಕೊಂಡಿದ್ದರು? ನಾನು ಯಾವ ಎಜೆಂಟ್ ಗಳನ್ನು ಇಟ್ಟುಕೊಂಡಿಲ್ಲ, ಇಟ್ಟುಕೊಳ್ಳುವುದೂರ ಇಲ್ಲ. ಅದೇನಿದ್ದರೂ ನಿಮ್ಮಂತವರ ಸಂಸ್ಕೃತಿ ಎಂದು ಸಿಎಂ ಡಿಕೆಶಿಗೆ ಸಚಿವರು ತಿರುಗೇಟು ನೀಡಿದರು.

ಸಿಂಗಾಪುರ ಹೆಸರಿನಲ್ಲಿ ನೀವು ಬೆಂಗಳೂರಿನ ನಗರವನ್ನು ಅಭಿವೃದ್ಧಿ ಮಾಡಿದ್ದರಲ್ಲಾ, ಇವತ್ತು ಕೂಡ ಬೆಂಗಳೂರು ಜನರು ಅದರ ನೋವು ಅನುಭವಿಸುತ್ತಿದ್ದಾರೆ. ಹಾಗೆಯೇ ನಿಮ್ಮ ಬ್ರಾಂಡ್ ಬೆಂಗಳೂರಿನ ಹಣೆಬರವನ್ನು ಜನರು ಮೂರು ವರ್ಷಗಳಿಂದ ನೋಡುತ್ತಿದ್ದಾರೆ. ಇನ್ನು ಬಿಡದಿ ಟೌನ್ಶಿಪ್ ಮಾಡಿದರೆ ಇನ್ನೇನು ಇನ್ನೇನು ಮಾಡುತ್ತಿರೋ ದೇವರೇ ಬಲ್ಲ. ಯಾರು ಯಾರಿಗೆ ರೈತರ ಭೂಮಿಯನ್ನು ಹರಿದು ಹರಾಜು ಹಾಕುತ್ತಿರೋ ಗೊತ್ತಿಲ್ಲ ಎಂದು ಸಚಿವರು ಮಾರ್ಮಿಕವಾಗಿ ಹೇಳಿದರು.

ನಾನು ಬಿಡದಿ ಯೋಜನೆಯನ್ನು ರದ್ದು ಮಾಡಿದ್ದೆ:

2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ನಗರದ ಮೇಲೆ ಒತ್ತಡ ಕಡಿಮೆ ಮಾಡಲು ಐದು ಟೌನ್ಶಿಪ್ ಮಾಡಲು ಯೋಜನೆ ಮಾಡಿದ್ದು ನಾನೇ ಗೌರವಾನ್ವಿತ ಮುಖ್ಯಮಂತ್ರಿ ಅವರೇ.., ಈ ಯೋಜನೆ ಮಾಡುವಾಗ ಬಿಡದಿ ಭಾಗದಲ್ಲಿ ಮೂರು ಬಾರಿ ಸಭೆ ಮಾಡಿದ್ದೆ. ಕೃಷ್ಣ ಕಚೇರಿಯಲ್ಲಿ ರೈತರನ್ನು ಕರೆದು ಚರ್ಚೆ ಮಾಡಿದ್ದೆ. ಇಂತಹ ದಮ್ಮು ತಾಕತ್ತು ನಿಮಗೆ ಇದೆಯಾ? ರೈತರ ಜೊತೆ ಚರ್ಚೆ ಮಾಡುವ ಕನಿಷ್ಠ ಸೌಜನ್ಯವನ್ನು ನೀವು ತೋರಿಸಿದ್ದೀರಾ? ಅಂದು ವಿಶೇಷ ಕೈಗಾರಿಕಾ ವಲಯಗಳನ್ನು (SEZ) ನಿರ್ಮಲ ಮಾಡುವುದಕ್ಕಾಗಿ ಆಗ ಅಧಿಕಾರದಲ್ಲಿದ್ದ ನಿಮ್ಮದೇ ಪಕ್ಷದ ಕೇಂದ್ರ ಸರ್ಕಾರ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ನಾನು ಜನರನ್ನು ಮನವೊಲಿಸಿ ಭೂಮಿ ಪಡೆದುಕೊಳ್ಳುವ ಬಗ್ಗೆ ಪ್ರಯತ್ನ ಮಾಡಿದೆ. ನಿಮ್ಮ ಹಾಗೆ ದುರ್ವರ್ತನೆ, ದಬ್ಬಾಳಿಕೆ ತೋರಲಿಲ್ಲ. ನೂರಾರು ವರ್ಷಗಳಿಂದ ಆ ಮಣ್ಣನ್ನೇ ನಂಬಿ ಬದುಕಿ ಬಾಳುತ್ತಿರುವ ಜನರನ್ನು ಅಲ್ಲಿಂದ ಹೊರಕ್ಕೆ ಹಾಕಲು ನಾನು ಪ್ರಯತ್ನಿಸಲಿಲ್ಲ. ನೋಟಿಫಿಕೇಷನ್ ಮಾಡುವ ಮುಂಚೆ ರೈತರ ಜೊತೆ ಮಾತುಕತೆ ನಡೆಸಬೇಕು ಎನ್ನುವ ಕನಿಷ್ಠ ನಾನು ನಿಮಗೆ ಇಲ್ಲದಾಯಿತಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಗಳೇ.. ನೀವು ತಪ್ಪು ಮಾಡುತ್ತಿದ್ದೀರಿ. ಬಡ ರೈತರ ಜಮೀನು, ಕೊಳ್ಳೆ ಹೊಡೆದು ಯಾರಿಗೂ ಲಾಭ ಮಾಡಿಕೊಡಲು ಹೊರಟಿದ್ದೀರಿ. ಇದರಲ್ಲಿ ನಿಮ್ಮ ಹಿತಾಸಕ್ತಿ ಅಡಗಿದೆ, ನಿಮ್ಮ ವ್ಯವಹಾರ ಅಡಗಿದೆ. ಅವತ್ತು ಒಂದು ದಿನ ಚೀಟಿ ಇಟ್ಟುಕೊಂಡು ಭಾಷಣ ಮಾಡುವಾಗ ನಿಮ್ಮ ಮುಖದಲ್ಲಿ ಪಾಪಪ್ರಜ್ಞೆ ತುಂಬಿ ತುಳುಕುತ್ತಿತ್ತು. ನೀವು ಎಷ್ಟೇ ಪ್ರಯತ್ನ ಮಾಡಿದರು ನೀವು ಮಾಡುತ್ತಿರುವ ಪಾಪ ನಿಮ್ಮ ಮುಖದಲ್ಲಿ ಮರೆಮಾಚಲು ಸಾಧ್ಯವಿಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಬಗ್ಗೆ ಹೊಟ್ಟೆ ಉರಿ ಪಡುವಷ್ಟು ಘನಂದಾರಿ ಕೆಲಸ ನೀವೇನು ಮಾಡುತ್ತಿಲ್ಲ. ನೀವೇನು ಜನರಿಗೆ ಅನುಕೂಲವಾಗುವ ಕೆಲಸ ಮಾಡುತ್ತಿದ್ದೀರಿ ಅಂತ ಏನೂ ಇಲ್ಲ. ಎಷ್ಟು ದೋಚಬೇಕೋ ಅಷ್ಟನ್ನು ದೋಚಲು ಪ್ಲಾನ್ ಮಾಡ್ಕೊಂಡು ಕೂತಿದ್ದೀರಿ. ಜನರಿಗೆ ನಿಮ್ಮಿಂದ ಒಳ್ಳೆಯದಾಗುತ್ತದೆ ಎಂದು ನಂಬಲು ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿ ಯಾರು ಮುಖ್ಯಮಂತ್ರಿ ಯಾರು? ಏನೇನೋ ಮಾಡುತ್ತಿದ್ದಾರೆ? ಎಂದು ನೋಡಿಕೊಂಡು ಕೂರುವಷ್ಟು ಸಮಯ ನನಗಿಲ್ಲ. ನಿಮ್ಮ ಮೇಲೆ ಹೊಟ್ಟೆ ಉರಿ ಪಡುವುದಕ್ಕೂ ನನಗೆ ಪುರುಸೊತ್ತು ಇಲ್ಲ. ನಿಮಗೇನಾದರೂ ಪುರುಸೊತ್ತು ಇದ್ದರೆ ಹೊಟ್ಟೆ ಉರಿ ಪಟ್ಟುಕೊಳ್ಳಿ. ಮುಖ್ಯಮಂತ್ರಿ ಆಗಿದ್ದೀರಿ, ಜನತೆಯಿಂದ ವರ್ತಿಸುವುದನ್ನು ಕಲಿತುಕೊಳ್ಳಿ..ಈ ರೀತಿ ಲಘುವಾಗಿ ಮಾತಾಡುವುದು ನಿಲ್ಲಿಸಿ ಮುಖ್ಯಮಂತ್ರಿಗಳೇ.. ನನಗೆ ಮತ ಕೊಟ್ಟ ಜನ ಅವರು. ಅವರ ಮನಸ್ಸಿಗೆ‌ ನೋವು ಕೊಟ್ಟು ಒಕ್ಕಲೆಬ್ಬಿಸುವುದಿಲ್ಲ ಅಂತ ಅವತ್ತು ತೀರ್ಮಾನ ಮಾಡಿದ್ದೆ. ನಿಮಗೆ ತಾಕತ್ತಿದ್ದರೆ ಜನರ ಭೂಮಿಯನ್ನು ಬಿಟ್ಟುಬಿಡಿ ನೋಡೋಣ ಎಂದು ಸವಾಲು ಹಾಕಿದರು.

ಅವತ್ತು ಯೋಜನೆಯನ್ನು ನಾನು ಸ್ಕ್ರಾಪ್ ಮಾಡಿದಾಗ ಏನೇನು ನಡೆಯಿತು ಎಂಬುದು ಪ್ರತಿಯೊಂದು ದಾಖಲೆಯಲ್ಲಿದೆ. ಡಿಎಲ್ ಎಫ್ ಬಗ್ಗೆ ಮಾತನಾಡಿದ್ದೀರಿ. ಮೇಲೆ ಬಗ್ಗೆ ಯಾರಿಗೆ ಯಾವ ರೀತಿಯ ಸಂಬಂಧವಿದೆ ಎಂಬುದು ಇಡೀ ಜಗತ್ತಿಗೆ ಗೊತ್ತು ಸಮಯ ಬಂದಾಗ ಅದರ ಬಗ್ಗೆಯೂ ಬಿಚ್ಚಿಡೋಣವಂತೆ ಎಂದು ಮುಖ್ಯಮಂತ್ರಿ ಡಿಕೆಶಿಗೆ ಸಚಿವ ಕುಮಾರಸ್ವಾಮಿ ಅವರು ನೇರವಾಗಿ ತಿರುಗೇಟು ನೀಡಿದರು

ಅಸೂಯೆ ಪಡೋದು, ಇನ್ನೊಬ್ಬರಿಗೆ ನೋವು ಕೊಡುವುದು ನಿಮ್ಮ ಚಾಳಿ. ರಾಜ್ಯಕ್ಕೆ ಎರಡು ಭಾರಿ ಸಿಎಂ ಆದವನು ಆ ಜಮೀನಿಗೆ ಪೋಡಿ ಮಾಡಿಸಿಕೊಳ್ಳಲು ನನ್ನಿಂದ ಆಗಿಲ್ಲ. ಮಕ್ಕಳನ್ನು ಕಿಡ್ನಾಪ್ ಮಾಡಿ ಅವರ ಅಪ್ಪ ಅಮ್ಮನನ್ನು ಹೆದರಿಸಿ ಜಮೀನು ಬರೆಸಿಕೊಳ್ಳುವ ಕೆಲಸ ನಾನು ಮಾಡಿಲ್ಲ. ನಿಮ್ಮ ಹಾಗೆ ಕೆಟ್ಟ ಬದುಕು ಬದುಕಿ ನನಗೆ ಗೊತ್ತಿಲ್ಲ ಎಂದು ಸಚಿವರು ಟೀಕಾಪ್ರಹಾರ ನಡೆಸಿದರು.

ನೀವು ಯಾವ ರೀತಿ ಟೌನ್ಶಿಪ್ ಕಟ್ಟುತ್ತೀರಿ ಎಂಬುದನ್ನು ನಾನು ಈಗಾಗಲೇ ನೋಡಿದ್ದೇನೆ. ಹೊಸಕರೆಹಳ್ಳಿ ಬಳಿ ಶೋಬಾಯಮಾನವಾಗಿ ಕಟ್ಟಿದ್ದೀರಲ್ಲವೆ? ಯಾರಪ್ಪ ಎನ್ಒಸಿ ಕೊಟ್ಟಿದ್ದು? ಯಾರ ಹೆಸರಿನಲ್ಲಿ ಎನ್ಒಸಿ ಪಡೆದುಕೊಂಡಿದ್ದೀರಿ? ಎನ್ಒಸಿ ಪಡೆದುಕೊಂಡ ಗೌರಮ್ಮ ಮತ್ತು ಸುರೇಶ ನಿಮಗೇನಾಗಬೇಕಪ್ಪ? ನಿಮಗೆ ಯಾವ ರೀತಿಯ ಸಂಬಂಧ? ಜನರಿಗೆ ಇದೆಲ್ಲವೂ ಅರ್ಥವಾಗಬೇಕು ಅಲ್ಲವೇ? ಭೂಮಿ ಕಳೆದುಕೊಂಡ ನಾಲ್ಕು ಸಾವಿರ ಜನರಿಗೆ ನೈಸ್ ಕಂಪನಿ ಇನ್ನೂ ನಿವೇಶನಗಳನ್ನು ಕೊಟ್ಟಿಲ್ಲ. ನಿಮಗೆ ಮಾತ್ರ ಎನ್ಒಸಿ ಸಿಕ್ಕಿ ಆ ಜಾಗದಲ್ಲಿ ದೊಡ್ಡ ದೊಡ್ಡ ಶಿಖರಗಳು ಎದ್ದು ನಿಂತಿವೆ! ಇದು ಯಾವ ರೀತಿಯ ಜಾದು? ಯಾವ ರೀತಿಯ ಮಾಯೆ? ಎಂಬುದನ್ನು ಉಳಿದ ರೈತರಿಗೂ ನೀವು ಹೇಳಿಕೊಡಬೇಕು ಎಂದು ಕುಮಾರಸ್ವಾಮಿ ಅವರು ನೇರವಾಗಿ ಸಿಎಂ ಡಿಕೆಶಿಗೆ ಚುಚ್ಚಿದರು.

ಪದೇ ಪದೇ ಜೈಲಿಗೆ ಹೋಗಿದ್ದೆ.. ಜೈಲಿಗೆ ಹೋಗಿದ್ದೆ.. ಎಂದು ಹೇಳಿಕೊಳ್ಳುತ್ತಾರೆ. ಅವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿ ಜೈಲಿಗೆ ಹೋಗಿದ್ದರ? ಸತ್ಯ ಒಂದಲ್ಲ ಒಂದು ದಿನ ಹೊರಗಡೆ ಬರುತ್ತದೆ, ಬಹಳ ದಿನ ಬೇಕಾಗಿಲ್ಲ. ಅವರು ಬಂದ ಹಿನ್ನೆಲೆ ನೋಡಿದರೆ ಅವರ ಬಗ್ಗೆ ತಿಳಿಯುತ್ತದೆ. ನೀವು ಮಾತಾಡುವಾಗಲೂ ನಿಮ್ಮ ಮುಖದಲ್ಲಿ ಭಯ, ಪಾಪಪ್ರಜ್ಞೆ ಎದ್ದು ಕಾಣುತ್ತದೆ. ನಿಮ್ಮದು ಕಟುಕ ಹೃದಯ. ನಿಮಗೆ ಯಾವ ನೋವು ಆಗುತ್ತದೆ? ಕುಮಾರಕೃಪ ಪರಂಪಾರಿಕ ಕಟ್ಟಕ್ಕೆ ಅನ್ಯಾಯ ಮಾಡಿದ್ದಿರಿ. ನಿಮ್ಮ ಪಾಪದ ಕೊಡ ತುಂಬುತ್ತಿದೆ. ಅಧಿಕಾರ ನಿಮ್ಮ ಒಬ್ಬರ ಸ್ವತ್ತಲ್ಲ, ನಿಮಗೆ ಅದು ಶಾಶ್ವತವೂ ಅಲ್ಲ. ನಿಮಗೆ ಪಾಠ ಕಲಿಸಲು ರಾಜ್ಯದ ಜನ ಕಾಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

Related Articles

Back to top button