ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಮ ಮಂದಿರ ದೇಣಿಗೆ ಸಂಗ್ರಹ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಧರ್ಮದ ಹೆಸರಲ್ಲಿ ಭ್ರಷ್ಟಾಚಾರ ನಡೆಯುವುದು ನಿಲ್ಲಲಿ. ದೇಣಿಗೆ ಸಂಗ್ರಹ ಪಾರದರ್ಶಕವಾಗಿರಲಿ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಬಿಜೆಪಿಯನ್ನಾಗಲಿ, ಸರ್ಕಾರವನ್ನಾಗಲಿ ಬೈದಿಲ್ಲ. ರಾಮನಿಗೆ ಅವಮಾನವಾಗುವ ಪದ ಬಳಕೆಯನ್ನೂ ಮಾಡಿಲ್ಲ. ಆದರೆ ದೇಣಿಗೆ ಸಂಗ್ರಹದ ಹೆಸರಲ್ಲಿ ಕೆಲವರು ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ಇಂದು ಪೋಲಿ ಪುಂಡರು ಕೂಡ ರಾಮ ಮಂದಿರದ ಹೆಸರಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ. ಇವರಿಗೆಲ್ಲ ಹಣ ಸಂಗ್ರಹಕ್ಕೆ ಅಧಿಕಾರ ಕೊಟ್ಟಿದ್ಯಾರು? ವಿಹೆಚ್ ಪಿ ಅಧಿಕಾರ ನೀಡಿದೆಯೇ? ಇವರು ಸಂಗ್ರಹಿಸುವ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆ ಕೊಡಲಾಗುತ್ತಿದೆಯೇ? ಹಣ ದುರುಪಯೀಗವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ, ಪಾರದರ್ಶಕವಾಗಿ ದೇಣಿಗೆ ಸಂಗ್ರಹವಾಗಲಿ ಎಂಬುದು ನನ್ನ ಆಗ್ರಹ ಎಂದರು.
ಇನ್ನು ದೇಣಿಗೆ ಸಂಗ್ರಹದ ವೇಳೆ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವುದನ್ನು ನಾನು ಪ್ರಶ್ನೆ ಮಾಡುತ್ತಿದ್ದೇನೆ. ಇದು ಧರ್ಮದ ಹೆಸರಲ್ಲಿ ವಿಭಜನೆಗೆ ಪ್ರೇರಣೆ ನೀಡಿದಂತಾಗುತ್ತದೆ. ಈ ರೀತಿ ಸ್ಟಿಕ್ಕರ್ ಅಂಟಿಸುವ ಅಗತ್ಯವೇನಿದೆ? ನನ್ನ ಹೇಳಿಕೆಯಲ್ಲಿ ಬೇಜವಾಬ್ದಾರಿ ಇದೆ ಎಂದು ಹೇಳುತ್ತಿದ್ದಾರೆ. ಆದರೆ ಮೊದಲು ತಮ್ಮ ಜವಾಬ್ದಾರಿ ಅರಿಯಬೇಕು. ರಾಮ, ಭಕ್ತಿ, ಹಣ, ಅಧಿಕಾರ, ರಾಜಕಾರಣವಾಗಿ ಪರಿವರ್ತನೆಯಾಗುವುದನ್ನು ಅವರು ತಡೆಯಬೇಕು ಹೊರತು ರಾಜಕೀಯ ಹೇಳಿಕೆ ಸರಿಯಲ್ಲ ಎಂದು ಹೇಳಿದರು.
ನಾನೆಂದೂ ದೇವರು, ಧರ್ಮದ ಹೆಸರಲ್ಲಿ ರಾಜಕಾರಣ ಮಾಡಿಲ್ಲ. ರಾಮನ ಹೆಸರನ್ನು ಮುಂದಿಟ್ಟು ರಾಜಕಾರಣ ಮಾಡುತ್ತಿರುವವರು ನೀವು. ನಾನು ರಾಮ ಮಂದಿರ ನಿರ್ಮಾಣಕ್ಕೆ ಎಂದಿಗೂ ವಿರೋಧ ವ್ಯಕ್ತಪಡಿಸಿಲ್ಲ. ರಾಮ ಮಂದಿರ ನಿರ್ಮಾಣವಾಗಲಿ ಎಂಬ ಭಾವನೆ ನನ್ನದೂ ಇದೆ. ಆದರೆ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ವಿಭಜನೆ ಮಾಡುವುದನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ