Politics

*6-7 ಸಚಿವರ ಅಕ್ರಮಗಳ ಬಗ್ಗೆ ಶೀಘ್ರವೇ ದಾಖಲೆ ಬಿಡುಗಡೆ: ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್*

ರಾಜ್ಯಪಾಲರಿಗೆ ಅಪಮಾನ; ಮುಖ್ಯಮಂತ್ರಿ, ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ಪ್ರಗತಿವಾಹಿನಿ ಸುದ್ದಿ: ಸರಣಿ ಅಪರಾಧಗಳನ್ನು ಮಾಡಿರುವ ಒಬ್ಬ ಭ್ರಷ್ಟ ಐಪಿಎಸ್ ಅಧಿಕಾರಿಯೊಬ್ಬ ರಾಜ್ಯಪಾಲರ ಕಚೇರಿಯ ಸಿಬ್ಬಂದಿಯನ್ನು ತನಿಖೆ ಮಾಡುವ ಅನುಮತಿ ಕೇಳಿದ್ದಾನೆ. ಈತನಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಪೂರ್ಣ ಕೃಪಾಕಟಾಕ್ಷವಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಲೋಕಾಯುಕ್ತ ವಿಶೇಷ ತನಿಖಾ ದಳದ ಐಜಿಪಿ ಎಂ.ಚಂದ್ರಶೇಖರ್ ಆ ಭ್ರಷ್ಟ ಅಧಿಕಾರಿ ಆಗಿದ್ದು, ಇಂಥ ದರೋಡೆಕೋರ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ತನಿಖೆ ಮಾಡಿಸುತ್ತಿದೆ ಎಂದು ಸಚಿವರು ಗಂಭೀರ ಆರೋಪ ಮಾಡಿದರು.

ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಚಿವರು ಐಜಿಪಿ ಚಂದ್ರಶೇಖರ್ ವಿರುದ್ಧ ಸರಣಿ ದಾಖಲೆಗಳ ಸಮೇತ ಆರೋಪಗಳನ್ನು ಮಾಡಿದರು.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾವ ತನಿಖೆಯೂ ಪಾರದರ್ಶಕವಾಗಿ ನಡೆಯುತ್ತಿಲ್ಲ. ರಾಜಕೀಯ ಸೇಡಿಗಾಗಿ ತನಿಖೆ ನಡೆಸಲಾಗುತ್ತಿದೆ. ಅದಕ್ಕೆ ಚಂದ್ರಶೇಖರ್ ಅವರಂಥ ಕಳಂಕಿತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಅಧಿಕಾರಿಯ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ನನ್ನ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಲೋಕಾಯುಕ್ತಕ್ಕೆ ಬರೆದಿದ್ದ ಅತಿ ಗೌಪ್ಯ ಪಾತ್ರವೊಂದು ಸೋರಿಕೆ ಆಗಿತ್ತು. ಅದು ನಮ್ಮ ಕುಟುಂಬದ ವಿರುದ್ಧ ಅನೇಕ ತಿಂಗಳಿನಿಂದ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿರುವ ಖಾಸಗಿ ಸುದ್ದಿವಾಹಿನಿಗೆ ಆ ಪತ್ರ ಸೋರಿಕೆ ಆಗಿತ್ತು. ಅದು ಐಜಿಪಿ ಚಂದ್ರಶೇಖರ್ ಅವರಿಂದಲೇ ಸೋರಿಕೆ ಆಗಿದೆ. ಆದರೆ, ಅದೇ ಅಧಿಕಾರಿ ರಾಜ್ಯಪಾಲರ ಕಚೇರಿಯಿಂದಲೇ ಪತ್ರ ಸೋರಿಕೆ ಆಗಿದೆ ಎಂದು ಕಥೆ ಕಟ್ಟಿ ರಾಜ್ಯಪಾಲರ ಕಾರ್ಯಾಲಯದ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲು ಅನುಮತಿ ಕೊಡುವಂತೆ ಲೋಕಾಯುಕ್ತ ತನಿಖಾ ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಸಂವಿಧಾನ ಮತ್ತು ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವ ರಾಜ್ಯಪಾಲರ ಕಾರ್ಯಾಲಯದ ಬಗ್ಗೆ ತನಿಖೆಗೆ ಅನುಮತಿ ಕೋರುವ ದರ್ಪವನ್ನು ಈ ಅಧಿಕಾರಿ ತೋರಿಸಿದ್ದಾರೆ. ಈ ಅಧಿಕಾರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮೊದಲೇ ಸರಣಿ ಅಪರಾಧಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡಿರುವ ಐಜಿಪಿ ಚಂದ್ರಶೇಖರ್ ಅವರಿಗೆ ರಾಜ್ಯ ಸರ್ಕಾರ ಆಮಿಷಗಳನ್ನು ಒಡ್ಡಿ ಇಂತಹ ಕಾನೂನು ಬಾಹಿರ ಕೃತ್ಯ ಮಾಡಿಸುತ್ತಿದೆ. ಅವರಿಗೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಹುದ್ದೆಯ ಆಮಿಷ ಒಡ್ಡಲಾಗಿದೆ. ಈ ಸರ್ಕಾರ ಒಬ್ಬರಿಗೆ ಈ ರೀತಿಯ ಆಮಿಷ ಒಡ್ಡಿಲ್ಲ.. ಬಿ.ಕೆ.ಸಿಂಗ್, ಎಂ.ಚಂದ್ರಶೇಖರ್, ಗುಪ್ತದಳ ಮುಖ್ಯಸ್ಥರು ಸೇರಿದಂತೆ ಅನೇಕರಿಗೆ ಕಮಿಷನರ್ ಮಾಡುತ್ತೇವೆ ಎಂದು ಟೋಪಿ ಹಾಕಿದ್ದಾರೆ. ಇಂಥ ಸರ್ಕಾರದಲ್ಲಿ ತನಿಖೆಗಳು ಪಾರದರ್ಶಕವಾಗಿ ನಡೆಯುತ್ತವೆ ಎನ್ನುವ ನಂಬಿಕೆ ಇಲ್ಲ ಎಂದು ಕೇಂದ್ರ ಸಚಿವರು ದೂರಿದರು.

ಪತ್ರ ಸೋರಿಕೆ ಬಗ್ಗೆ ರಾಜ್ಯಪಾಲರ ಸಿಬ್ಬಂದಿ ವಿಚಾರಣೆಗೆ ಚಂದ್ರಶೇಖರ್ ಪತ್ರ ಬರೆದು ಉದ್ದಟತನ ತೋರಿಸಿದ್ದಾರೆ. ರಾಜ್ಯಪಾಲರ ಕಚೇರಿ ಪರಿಶೀಲನೆ ಮಾಡುತ್ತೇನೆ ಎಂದು ಚಂದ್ರಶೇಖರ್ ಕೇಳುತ್ತಾರೆ ಎಂದರೆ ಆತನಿಗೆ ಎಷ್ಟು ಉದ್ದಟತನ ಇರಬೇಕು? ರಾಜ್ಯಪಾಲರ ಕಚೇರಿ ಸರ್ಚ್ ಮಾಡುವ ಸೂಪರ್ ಕಾಪ್ ಯಾರಿರಬೇಕು ಎಂದು ಕೆದಕಿದರೆ ಇವರ ಹಿನ್ನಲೆ ಗೊತ್ತಾಯಿತು ನನಗೆ ಎಂದು ಚಂದ್ರಶೇಖರ್ ಹಿನ್ನೆಲೆಯನ್ನು ಬಿಡಿಸಿಟ್ಟರು ಕುಮಾರಸ್ವಾಮಿ ಅವರು.

ಈ ಚಂದ್ರಶೇಖರ್ ಮೂಲತಃ ಹಿಮಾಚಲ ಪ್ರದೇಶದ ಕೇಡರ್ ನ ಐಪಿಎಸ್ ಅಧಿಕಾರಿ. 1998ರಲ್ಲಿ ಹಿಮಾಚಲ ಪ್ರದೇಶದ ಕೇಡರ್ ಆಗಿ ಆಯ್ಕೆಯಾಗಿದ್ದವರು. ಐದು ವರ್ಷಗಳ ಅವಧಿಗೆ ನಿಯೋಜನೆ ಮೇಲೆ ಕರ್ನಾಟಕಕ್ಕೆ ಬಂದರು ಇವರು. ಈ ಅಧಿಕಾರಿ ಹಿಮಾಚಲ ಪ್ರದೇಶದಲ್ಲಿ ಹವಾಮಾನ ಸರಿಯಾಗಿಲ್ಲ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ ಕರ್ನಾಟಕದಲ್ಲೇ ಅಧಿಕಾರದಲ್ಲಿ ಮುಂದುವರೆದಿದ್ದಾರೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ನಿಯೋಜನೆ ಮೇಲೆ ಬಂದ ಈ ವ್ಯಕ್ತಿ ಆಮೇಲೆ ಕರ್ನಾಟಕ ಕೇಡರ್ ಅಧಿಕಾರಿ ಆಗುತ್ತಾರೆ. ಅದಕ್ಕೆ ಏನೆಲ್ಲಾ ಅಕ್ರಮ ಎಸಗಿದರು? ಯಾರು ಯಾರ ನೆರವು ಪಡೆದುಕೊಂಡರು ಎನ್ನುವುದನ್ನು ನಾನು ಇಲ್ಲಿ ಹೇಳುವಂತಿಲ್ಲ. ಅದು ಬಹಳ ಸೂಕ್ಷ್ಮ ವಿಚಾರ ಎಂದು ಕೇಂದ್ರ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಐಜಿಪಿ ಚಂದ್ರಶೇಖರ್ ವಿರುದ್ಧ ಹಲವಾರು ದೂರುಗಳು ದಾಖಲಾಗಿ, ಆರೋಪ ಪಟ್ಟಿಗಳು ಸಲ್ಲಿಕೆಯಾಗಿವೆ. ಈ ವ್ಯಕ್ತಿ ಸರಣಿ ಅಪರಾಧಗಳನ್ನು ಮಾಡಿರುವ ಅಧಿಕಾರಿ. ತಮ್ಮ ಅಧೀನದಲ್ಲಿದ್ದ ಅಧಿಕಾರಿಯಿಂದ ಭೂಮಿ ವ್ಯವಹಾರಕ್ಕೆ ಸಂಬಂಧಿಸಿ ₹20 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಇನ್ಸ್ಪೆಕ್ಟರ್ ಒಬ್ಬರು ದೂರು ನೀಡಿದ್ದು, ಆ ದಾಖಲೆಯನ್ನು ಕೂಡ ಕೇಂದ್ರ ಸಚಿವರು ಓದಿ ಹೇಳಿದರು.

ಇದೇ ಅಧಿಕಾರಿ ಚಂದ್ರಶೇಖರ್ ತನ್ನ ಪತ್ನಿ ಹೆಸರಿನಲ್ಲಿ 38 ಮಹಡಿಯ ವಾಣಿಜ್ಯ ಕಟ್ಟಡ ಕಟ್ಟುತ್ತಿದ್ದಾರೆ. ಅದು ರಾಜಕಾಲುವೆ ಮೇಲೆ ಮಹಡಿ ಕಟ್ಟುತ್ತಿದ್ದಾರೆ. ಅಲ್ಲದೆ, ಕೆರೆಯನ್ನು ಕೂಡ ಒತ್ತುವರಿ ಮಾಡಿಕೊಳ್ಳಾಗಿದೆ. ಇದರ ಬಗ್ಗೆ ತನಿಖೆ ನಡೆಯಬೇಕು. ಇಂಥ ಅಧಿಕಾರಿಗಳನ್ನು ಇಟ್ಟುಕೊಂಡರೆ ರಾಜ್ಯ ಹೇಗೆ ಉದ್ದಾರ ಆಗುತ್ತದೆ. ಕಾನೂನುಬಾಹಿರವಾಗಿ ತನ್ನ ಅಧೀನದ ಅಧಿಕಾರಿಗಳನ್ನು, ಬಿಲ್ಡರುಗಳನ್ನು ಹೆದರಿಸಿ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಎಷ್ಟು ಕೋಟಿ ವಸೂಲಿ ಮಾಡಿದ್ದಾರೆ? ಎನ್ನುವುದು ಹೊರಗೆ ಬರಬೇಕು. ಇವರು ಒಂದು ಖಾಸಗಿ ತಂಡ ಇದೆ ಇಟ್ಟುಕೊಂಡು ಈ ದಂಧೆ ನಡೆಸುತ್ತಿದ್ದಾರೆ. ಈತನ ಬಗ್ಗೆ ದಾಖಲೆ ಸಮೇತ ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆಯುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನನ್ನ ಬಳಿ ಈತನ ವ್ಯವಹಾರಗಳ ಬಗ್ಗೆ ದಾಖಲೆಗಳು ಇವೆ. ವಿಜಯ್ ತಾತಾ ಎಂಬ ವ್ಯಕ್ತಿ ಇದ್ದ. ರಾಜ್ಯದಲ್ಲಿ ಆತ ಒಂದು ಮಾಧ್ಯಮ ಸಂಸ್ಥೆ ನಡೆಸುತ್ತಿದ್ದ. ಈತನದು ಕೂಡ ಸುಲಿಗೆ ದಂಧೆಯೇ. ಈತನ ವಿರುದ್ಧ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಆರೋಪ ಪಟ್ಟಿಗಳು ದಾಖಲಾಗಿವೆ. ಇಂಥವನ ಜತೆ ಸೇರಿಕೊಂಡು ಐಜಿಪಿ ಚಂದ್ರಶೇಖರ್ ಜನರನ್ನು ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಮಾಧ್ಯಮಗೋಷ್ಟಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್, ಮಂಜುನಾಥ್, ಪಕ್ಷದ ಹಿರಿಯ ನಾಯಕರಾದ ಜಪ್ರುಲ್ಲಾ ಖಾನ್, ಸುಧಾಕರ ಶೆಟ್ಟಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ದಾಖಲೆ ಇಟ್ಟರೆ ಆರೇಳು ಸಚಿವರ ತಲೆದಂಡ ಆಗುತ್ತದೆ

ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ಲೂಟಿ ಮಾಡುತ್ತಿದ್ದಾರೆ. ನನ್ನ ಬಳಿ ಇರುವ ದಾಖಲೆಗಳನ್ನು ಬಯಲು ಮಾಡಿದರೆ ಕೊನೇಪಕ್ಷ 6ರಿಂದ 7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಶೀಘ್ರದಲ್ಲಿಯೇ ಎಲ್ಲಾ ದಾಖಲೆಗಳನ್ನು ಬಿಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಸಿಎಂ ವಿರುದ್ಧ ಲೋಕಾಯುಕ್ತದಲ್ಲಿ 70ಕ್ಕೂ ಹೆಚ್ಚು ಪ್ರಕರಣ

ನಾನು ಬಹಳ ಕ್ಲೀನ್, ಪಾರದರ್ಶಕ, ನನ್ನ ಜೀವನ ತೆರೆದ ಪುಸ್ತಕ ಎಂದೆಲ್ಲಾ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣಗಳ ಕಥೆ ಏನಾಗಿದೆ? ಅವುಗಳ ತನಿಖೆ ಎಲ್ಲಿಗೆ ಬಂದಿದೆ ಎಂಬುದನ್ನು ಜನರಿಗೆ ಹೇಳಬೇಕಲ್ಲವೇ? ಎಂದು ಕೇಂದ್ರ ಸಚಿವರು ಒತ್ತಾಯ ಮಾಡಿದರು.

ಇವರು ಕ್ಲೀನ್, ಸ್ವಚ್ಚ ಆಗಿದ್ದರೆ ಇಷ್ಟು ಪ್ರಕರಣಗಳು ಇವರ ಮೇಲೆ ಏಕೆ ದಾಖಲಾಗುತ್ತಿದ್ದವು ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು; ಇಂಥ ಪ್ರಕರಣಗಳನ್ನು ಮುಚ್ಚಿ ಹಾಕಿಕೊಳ್ಳಲು ಹಿಂದೆ ಲೋಕಾಯುಕ್ತವನ್ನು ಮುಗಿಸಿ ಎಸಿಬಿಯನ್ನು ರಚನೆ ಮಾಡಿಕೊಂಡಿದ್ದರು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಬಗ್ಗೆ ಎರಡು ನಾಲಿಗೆಗಳಲ್ಲಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು; ಹಿಂದೆ ಐದು ವರ್ಷ ಅಧಿಕಾರದಲ್ಲಿ ಇದ್ದಾಗ, ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡದ ವೇಳೆ ರಾಜ್ಯಪಾಲರನ್ನು ವಾಚಾಮಗೋಚರ ಹೊಗಳಿದ್ದ ಸಿದ್ದರಾಮಯ್ಯ, ಅದೇ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟ ಮೇಲೆ ರಾಜ್ಯಪಾಲರನ್ನು ಹೀನಾಮಾನವಾಗಿ ತೆಗಳುತ್ತಿದ್ದಾರೆ. ಅವರ ಪಕ್ಷದ ಶಾಸಕರು, ಸಚಿವರು ಇದನ್ನೇ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಕಾಂಗ್ರೆಸ್ ನಾಯಕರದ್ದು ಹಂಸರಾಜ್ ಭಾರಧ್ವಾಜ್ ಅವರು ರಾಜ್ಯಪಾಲರು ಆಗಿದ್ದ ವೇಳೆ ಒಂದು ವರಸೆ, ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯಪಾಲರಾಗಿರುವ ವೇಳೆ ಇನ್ನೊಂದು ವರಸೆ. ಅದಕ್ಕೆ ಇಲ್ಲಿದೆ ನೋಡಿ ಸಾಕ್ಷಿ ಎಂದು ಈ ಹಿಂದೆ ಸಿದ್ದರಾಮಯ್ಯ ಅವರು ರಾಜ್ಯಪಾಲರ ಹೊಣೆಗಾರಿಕೆ ಬಗ್ಗೆ ನೀಡಿದ್ದ ಹೇಳಿಕೆಯನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟ ಮೇಲೆ ರಾಜ್ಯಪಾಲರ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಅತ್ಯಂತ ಕೀಳಾಗಿ ವರ್ತಿಸಿದ್ದಾರೆ. ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ್ದಾರೆ. ಪ್ರತಿಕೃತಿ ದಹನ ಮಾಡಿದ್ದಾರೆ. ಈಗ ಅವರು ಯಾರಿಗೆ ಚಪ್ಪಲಿ ಹಾರ ಹಾಕುತ್ತಾರೆ? ಯಾರ ಪ್ರತಿಕೃತಿ ದಹನ ಮಾಡುತ್ತಾರೆ ಎಂದು ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.

ಸರ್ಕಾರ ಮತ್ತು ಸಿಎಂ ತಪ್ಪು ಮಾಡಿದ್ದಾರೆ. ರಾಜ್ಯಪಾಲರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕ್ರಮ ಜರುಗಿಸಿದ್ದಾರೆ. ಸರ್ಕಾರದಿಂದ ಸಮಜಾಯಿಷಿ ಕೇಳುವುದು ರಾಜ್ಯಪಾಲರ ಹಕ್ಕು ಎಂದು ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. ಪ್ರತಿಪಕ್ಷದನಾಯಕರಾಗಿದ್ದಾಗ ಹಾಗೆ ಹೇಳಿದ್ದ ಸಿದ್ದರಾಮಯ್ಯ ಅದನ್ನೀಗ ಮರೆತಿದ್ದಾರೆ. ನಾನು ತೋರಿಸುತ್ತಿರುವ ಹೇಳಿಕೆಯನ್ನು ಅವರು ಒಮ್ಮೆ ಕೇಳಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.

ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಹಲವಾರು ಪ್ರಕರಣ ದಾಖಲಾಗಿವೆ. ಅವರೇನು ಸಾಚಾ ಅಲ್ಲ. ಮೂಡಾ ಹಗರಣದಲ್ಲಿ ಇವರ ಪಾತ್ರವೇ ಇಲ್ಲದಿದ್ದರೆ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳನ್ನು ತರಾತುರಿಯಲ್ಲಿ ಏಕೆ ಮಾಡುತ್ತಿದ್ದರು? ನ್ಯಾಯಲಯ ಆದೇಶ ನೀಡಿದ 48 ಗಂಟೆಯಾದರೂ ಸಿಎಂ ವಿರುದ್ಧ ಎಫ್ಐಆರ್ ಯಾಕೆ ದಾಖಲು ಮಾಡಲಿ? ಸರ್ಕಾರ, ಆಡಳಿತ ವ್ಯವಸ್ಥೆ ಕೆಲಸ ಮಾಡುವುದು ಹೀಗೆಯೇ? ಎಂದು ಅವರು ಕೇಳಿದರು.

ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಪೊಲೀಸರಿಗೆ ಸೂಚನೆ ಕೊಟ್ಟು ಕೆಲವರಿಗೆ ತೊಂದರೆ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನಾನು ಹೆದರುವ ಪೈಕಿ ಅಲ್ಲ ಎಂದು ಅವರು ಹೇಳಿದರು.

ನನಗೆ ಲೋಕಾಯುಕ್ತರಿಂದ ಯಾವುದೇ ನೋಟಿಸ್ ಬಂದಿಲ್ಲ. ನಾನೇ ಸ್ವಯಂ ಪ್ರೇರಿತವಾಗಿ ಲೋಕಾಯುಕ್ತ ಕಚೇರಿಗೆ ಹೋಗಿದ್ದೆ. ಇದು ಬಿಟ್ಡರೆ ಅವರು ಒಂದು ಹೆಜ್ಜೆ ಏನು ಮಾಡಲು ಆಗಲ್ಲ. ನಾನು ಆರ್ಕವತಿಯಲ್ಲಿ ರೀಡೂ ಮಾಡಿದಂತೆ ಮಾಡಿಲ್ಲ. ಸರ್ಕಾರಿ ಜಮೀನು ಕಬಳಿಸಿಲ್ಲ. ಮಾಡುವ ಅಕ್ರಮ ಎಲ್ಲಾ ಮಾಡಿ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಬಗ್ಗೆ ಮಾತನಾಡುತ್ತಾರೆ. ನಾಚಿಕೆ ಆಗಬೇಕು ಇವರಿಗೆ ಎಂದು ಅವರು ಕಿಡಿಕಾರಿದರು.

ನನ್ನ ವಿರುದ್ಧದ ಪ್ರಕರಣಗಳು ನ್ಯಾಯಲಯದಲ್ಲಿ ತಿರ್ಮಾನ ಆಗಲಿ. ತೀರ್ಪು ಬರಲಿ, ತಲೆಬಾಗುತ್ತೇನೆ. ಇವರು ಕೇಳಿದ ಕೂಡಲೇ ನಾನು ಯಾಕೆ ರಾಜೀನಾಮೆ ಕೊಡಲಿ? ರಾಜೀನಾಮೆ ಕೊಡಲು ಏನಿದೆ? ಸಂವಿಧಾನ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲ್ಲ. ಅಂತಹ ಪರಿಸ್ಥಿತಿ ಬಂದರೆ ಗೌರವಯುತವಾಗಿ ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ಕೊಡಬೇಕಾದಾಗ ನಾನೇ ಕೊಡುತ್ತೇನೆ. ಅದರ ಬಗ್ಗೆ ಸಿದ್ದರಾಮಯ್ಯ ಹೇಳುವುದು ಬೇಡ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button