
ಪ್ರಗತಿವಾಹಿನಿ ಸುದ್ದಿ: ಖ್ಯಾತ ಸಾಹಿತಿ, ಗೀತ ರಚನೆಕಾರ ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ ವಿಧಿವಶರಗಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಇಂದು ಬೆಳಿಗ್ಗೆ 7ಗಂಟೆಗೆ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದ ಹೆಚ್.ಎಸ್.ವೆಂಕಟೇಶ್ ಮೂರ್ತಿ ಸಾಹಿತ್ಯ ರಚನೆಯಲ್ಲಿ ಅದ್ಭುತ ಕೃಷಿ ಮಾಡಿದ್ದವರು. ಅವರು ಬರೆದಿರುವ ಒಂದೊಂದು ಗೀತೆಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರ ಜೊತೆಗೆ ಜನಮಾನಸದಲ್ಲಿ ಅಚ್ಚಳಿಯುಂತೆ ಇರುವಂತದ್ದು.
1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊದಿಗೆರೆ ಎಂಬ ಹಳ್ಳಿಯಲ್ಲಿ ಜನಿಸಿದವರು. ಕನ್ನಡದಲ್ಲಿ ಕಥನ ಕವನಗಳು ಎಂಬ ಮಹಾಪ್ರಬಂಧ ಮಂಡಿಸಿ ಪಿಹೆಚ್ ಡ್ ಪದವಿ ಪಡೆದರು. 1973ರಲ್ಲಿ ಬೆಂಗಳೂರಿನ ಸೆಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡರು. 2000ದಲ್ಲಿ ನಿವೃತ್ತಿಯಾದರು.ಬಳಿಕವೂ ಬೆಂಗಳೂರಿನಲ್ಲಿ ನೆಲೆಸಿದ್ದ ಹೆಚ್.ಎಸ್.ವೆಂಕಟೇಶ್ ಮೂರ್ತಿ ಸಾಹಿತ್ಯ ರಚನೆ, ಗೀತರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಪರಿವೃತ್ತ, ಬಾಗಿಲು ಬಡಿವ ಜನಗಳು, ಮೂವತ್ತು ಮಳೆಗಾಲ ಸೇರಿದಂತೆ 15ಕ್ಕೂ ಹೆಚ್ಚು ಕವನ ಸಂಕಲನಗಳು, ಬಾನಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರ, ಕಥಾಸಂಕಲನ, ತಾಪಿ ಅಮಾನುಷರು, ಕದಿರಿನ ಕೋಟೆ, ಅಗ್ನಿಮುಖಿ ಮೊದಲಾದ ಕಾದಂಬರಿಗಳನ್ನು ರಚಿಸಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಚಿನ್ನಾರಿ ಮುತ್ತ ಸಿನಿಮಾಗೆ ಕಥೆ ಹಾಗೂ ಸಂಭಾಷಣೆ ಹಾಗೂ ಎಲ್ಲಾ ಹಾಡುಗಳನ್ನು ಹೆಚ್.ಎಸ್.ವಿ ಬರೆದಿದ್ದರು. ಅಮೆರಿಕಾ ಅಮೆರಿಕಾ ಚಿತ್ರದ ಬಾನಲ್ಲಿ ಓಡೋ ಮೋಘಾ… ಪುನೀತ್ ನಟನೆಯ ಮೈತ್ರಿ ಚಿತ್ರಕ್ಕೆ ಹಾಡು, ಕಿರಿಕ್ ಪಾರ್ಟಿ ಚಿತ್ರದ ತೂಗು ಮಂಚದಲ್ಲಿ ಕೂತು… ಹಾಡು ಸೇರಿದಂತೆ ಹಲವಾರು ಚಿತ್ರಗಳಿಗೆ ಗೀತರಚನೆ, ಮುಕ್ತ, ಮಹಾಪರ್ವ ಸೇರಿದಂತೆ ಧಾರವಾಹಿಗಳಿಗೆ ಶೀರ್ಷಿಕೆ ಗೀತೆ ಬರೆದವರು.ಹೆಚ್ ಎಸ್ ವಿ ಅವರ ಇರುವಂತೆ ಇರಬೇಕು ತೊರೆದು ಸಾವಿರ ಚಿಂತೆ… ಭಾವಗೀತೆ ಇಂದಿಗೂ ಜನಪ್ರಿಯ. ಕನ್ನಡ ಸಾಹಿತ್ಯಕ್ಕೆ ಹೆಚ್.ಎಸ್.ವಿ ನೀಡಿರುವ ಕೊಡುಗೆ ಅಪಾರ. ಹಿರಿಯ ಸಾಹಿತಿಯ ಅಗಲಿಕೆಗೆ ಕನ್ನಡ ಸಾರಸ್ವತ ಲೋಕ, ಹಿರಿಯ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮರೆಯಾದ ಭಾವಗೀತೆಗಳ ಭಾವ- ಅಗಲಿದ ಕಾವ್ಯ ಚೇತನ ಡಾ.ಹೆಚ್ ಎಸ್ ವೆಂಕಟೇಶಮೂರ್ತಿ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ಶೋಕ
ಕನ್ನಡ ಭಾವಗೀತೆಗಳ ಭವ್ಯ ಪರಂಪರೆಯ ಪ್ರತಿನಿಧಿ ಡಾ. ಎಚ್ಎಸ್ ವೆಂಕಟೇಶಮೂರ್ತಿ ಅವರ ನಿಧನ ಕನ್ನಡ ಕಾವ್ಯ ಲೋಕಕ್ಕೆಅತಿ ದೊಡ್ಡ ಆಘಾತ ತಂದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಇಂದು ಮುಂಜಾನೆ ಡಾ. ಎಚ್ಎಸ್ ವಿ ಅವರ ನಿಧನದ ಸುದ್ದಿ ಬಂದ ಕೂಡಲೇ ದಿಗ್ಭ್ರಮೆ ಆಯಿತು. ಕನ್ನಡ ಸಾಹಿತ್ಯದ ಕಾವ್ಯ ಪರಂಪರೆಗೆ ಹೊಸ ಭಾಷ್ಯ ಬರೆದ ಕವಿ ಎಚ್ಎಸ್ ವಿ ಅವರು. ಸದಾ ನಮ್ಮ ಕಿವಿಗಳಲ್ಲಿ ಅನುರಣಿಸುವ ಅವರ ಗೀತೆಗಳು ಸೊಗಸು ಅನನ್ಯವಾದದ್ದು, ಅದು ತೂಗು ಮಂಚದಲ್ಲಿ, ಅಮ್ಮ ನಾನು ದೇವರಾಣೆ, ಲೋಕದ ಕಣ್ಣಿಗೆ ರಾಧೆಯು ಕೂಡ, ಹುಚ್ಚು ಕೋಡಿ ಮನಸು, ಇಂತಹ ಯಾವುದೇ ಗೀತೆಗಳು ನಮ್ಮನ್ನು ಬೇರೊಂದು ಲೋಕದ ಭಾವಲಹರಿಗೆ ಕೊಂಡೊಯ್ಯುತ್ತವೆ.
ಇಂತಹ ಗೀತೆಗಳನ್ನು ಕೊಟ್ಟ ಕವಿ ನಮ್ಮನ್ನು ಇಂದು ಅಗಲಿದ್ದಾರೆ. ನೂರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಡಾ. ಎಚ್ ಎಸ್ ವಿ ಬರೀ ಕವಿಯಾಗಿಯಲ್ಲ, ನಾಟಕಕಾರರಾಗಿ, ಅಂಕಣಕಾರರಾಗಿ, ಅನುವಾದ ,ಶಿಶು ಸಾಹಿತ್ಯ, ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ತಮ್ಮ ಅನನ್ಯ ಕೊಡುಗೆ ಕೊಟ್ಟಿದ್ದಾರೆ. ಬುದ್ಧ ಚರಣ ಮಹಾ ಕಾವ್ಯದ ಮೂಲಕ ಅವರು ಸಾಹಿತ್ಯದ ಮತ್ತೊಂದು ಮಜಲನ್ನು ಸ್ಪರ್ಶಿಸಿದ್ದಾರೆ.
ಕನ್ನಡ ಸಾಹಿತ್ಯ ಅದರಲ್ಲಿಯೂ ವಿಶೇಷವಾಗಿ ಭಾವಗೀತೆಗಳ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಅದ್ಭುತವಾದದ್ದು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ನೂರಾರು ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದ
ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಮಹತ್ವದ ಚೇತನವೊಂದನ್ನು ಕಳೆದುಕೊಂಡಿದೆ .
ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ, ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಸರಳ ಸಜ್ಜನಿಕೆಯ ಡಾ.ಹೆಚ್.ಎಸ್.ವಿ- ಪುರುಷೋತ್ತಮ ಬಿಳಿಮಲೆ ನುಡಿ ನಮನ
ಕನ್ನಡಿಗರ ಜೀವನೋತ್ಸಾಹವನ್ನು ಹೆಚ್ಚಿಸಿದ ಕವಿ ಎಚ್ ಎಸ್ ವೆಂಕಟೇಶ್ ಮೂರ್ತಿ ಅವರಿಗೆ ಗೌರವಪೂರ್ವಕ ನಮನಗಳು
ಎಚ್.ಎಸ್.ವೆಂಕಟೇಶಮೂರ್ತಿ (ಜೂನ್ ೨೩,೧೯೪೪ – ಮೇ ೩೦, ೨೦೨೫) ಅಂದರೆ ಕನ್ನಡಿಗರಿಗೆ ಬಹಳ ಪ್ರೀತಿ. ಅವರ ಕವಿತೆಗಳೆಲ್ಲ ಹಾಡುಗಳಾಗಿ ಕನ್ನಡಿಗರ ಮನೆ ಮನೆ ತಲುಪಿದ್ದು ನಮಗೆ ಗೊತ್ತೇ ಇದೆ. ಯಾವುದೇ ಸುಗಮ ಸಂಗೀತ ಕಾರ್ಯಕ್ರಮಗಳಲ್ಲಿ ವೆಂಕಟೇಶಮೂರ್ತಿಯವರ ಕವಿತೆಗಳನ್ನು ಹಾಡದಿದ್ದರೆ ಕಲಾವಿದರಿಗೂ ಸಮಾಧಾನ ಇಲ್ಲ. ಪೌರಾಣಿಕ ಪ್ರತಿಮೆಗಳನ್ನು ಆಧುನಿಕತೆಗೆ ಒಗ್ಗಿಸಿ ಬರೆಯುವ ಅವರ ಶೈಲಿ ಮೋಹಕವಾದುದು. ಈ ವಿಷಯದಲ್ಲಿ ʼ ನಾನು ನಿಸಾರ್ ಅಹಮದ್ ಅವರಿಂದ ಪ್ರೇರಣೆ ಪಡೆದೆʼ ಎಂದು ಅವರು ಹೇಳುತ್ತಿದ್ದರು.
ವೆಂಟೇಶಮೂರ್ತಿಯವರ ಬರೆಹದ ವಿಸ್ತಾರ ದೊಡ್ಡದು. ಅವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಹಳಗನ್ನಡ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ʼಕನ್ನಡದಲ್ಲಿ ಕಥನ ಕವನಗಳುʼ ಅವರಿಗೆ ಡಾಕ್ಟರೇಟ್ ಪದವಿ ತಂದುಕೊಟ್ಟ ಮಹಾಪ್ರಬಂಧ. ಅವರು ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಸಂಘ ಕಟ್ಟಿ ಅನೇಕರಿಗೆ ಕನ್ನಡದಲ್ಲಿ ಬರೆಯಲು ಪ್ರೇರಣೆ ನೀಡಿದರು.
ಪರಿವೃತ್ತ, ಬಾಗಿಲು ಬಡಿವ ಜನಗಳು, ಸಿಂದಬಾದನ ಆತ್ಮಕಥೆ, ಒಣ ಮರದ ಗಿಳಿಗಳು, ಸೌಗಂಧಿಕ, ಇಂದುಮುಖಿ, ಎಲೆಗಳು ನೂರಾರು, ಭೂಮಿಯೂ ಒಂದು ಆಕಾಶ, ಮೊದಲಾದುವು ಅವರ ಪ್ರಮುಖ ಕವನ ಸಂಕಲನಗಳು. ಬಾಣಸವಾಡಿಯ ಬೆಂಕಿ, ಮತ್ತು ಪುಟ್ಟಾರಿಯ ಮತಾಂತರ ಕತ ಸಂಕಲನಗಳು. ತಾಪಿ, ಅಮಾನುಷರು, ಕದಿರನ ಕೋಟೆ ಮತ್ತು ಅಗ್ನಿಮುಖಿ ಅವರ ಜನಪ್ರಿಯ ಕಾದಂಬರಿಗಳು. ನೂರು ಮರ, ನೂರು ಸ್ವರ, ಮೇಘದೂತ, ಮತ್ತು ಆಕಾಶದ ಹಕ್ಕು ವಿಮರ್ಶಾ ಸಂಕಲನಗಳು. ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಅಗ್ನಿವರ್ಣ ಅವರ ಪ್ರಸಿದ್ಧ ನಾಟಕಗಳು. ಕಾಳಿದಾಸನ ಋತುಸಂಹಾರವನ್ನು ಋತುವಿಲಾಸ ಹೆಸರಲ್ಲಿ ಸೊಗಸಾಗಿ ಅನುವಾದಿಸಿದ್ದಾರೆ. ಹಕ್ಕಿಸಾಲು ಮತ್ತು ಹೂವಿನ ಶಾಲೆ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ಮಕ್ಕಳ ಕವಿತೆಗಳ ಸಂಕಲನ. ಇಲ್ಲಿಯ ಕವಿತೆಗಳು ಕ್ಯಾಸೆಟ್ಟಲ್ಲಿ ಬಂದಾಗ ಮಾರಾಟದಲ್ಲಿ ಇತಿಹಾಸವನ್ನೇ ನಿರ್ಮಿಸಿತ್ತು.
ಮೂರ್ತಿಯವರು ಒಳ್ಳೆಯ ಭಾಷಣಕಾರರಾಗಿದ್ದರು. ಸ್ನೇಹಕ್ಕೆ ಬಹಳ ಬೆಲೆ ಕೊಡುತ್ತಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಅವರದು. ಅವರಿಗೆ ಅಂತಿಮ ನಮನಗಳು.