ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿರುವ ಎಂಎಲ್ ಸಿ ಹೆಚ್.ವಿಶ್ವನಾಥ್, 78 ವರ್ಷದ ಯಡಿಯೂರಪ್ಪನವರಿಗೆ ಅಧಿಕಾರದ ವ್ಯಾಮೋಹವಿರುವಾಗ 77 ವರ್ಷದ ನನಗೆ ಇರುವುದಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಶ್ವನಾಥ್, ಮೂರು ದಿನಗಳ ಬೆಳವಣಿಗೆ ನನಗೆ ಅಸಹ್ಯವೆನಿಸಿದೆ. ನಾನು ಮಾತನಾಡುವುದನ್ನು ಬಿಟ್ಟು ಬರವಣಿಗೆ ಕಡೆಗೆ ಗಮನ ಹರಿಸುತ್ತೇನೆ. ಎಲ್ಲಾ ವಿಚಾರಗಳನ್ನು, ಬಿಜೆಪಿ ಸರ್ಕಾರ ರಚನೆ ಪ್ರಹಸನ ಕುರಿತ ಮಾಹಿತಿಯನ್ನೂ ಬಾಂಬೆ ಡೇಸ್ ಪುಸ್ತಕದಲ್ಲಿ ಬರೆಯುತ್ತೇನೆ. ಕೆಲ ಅಧ್ಯಾಯಗಳು ಬಾಕಿ ಇವೆ. ಅದಾದ ಮೇಲೆ ಪುಸ್ತಕ ಹೊರಬರಲಿದೆ. ನಾನು ಬಿ.ಎಸ್.ವೈ ಅವರಿಗೆ ನನ್ನ ಮಂತ್ರಿ ಮಾಡಿ ಎಂದಿರಲಿಲ್ಲ. ಆದರೆ ನಮ್ಮಿಬ್ಬರ ನಡುವೆ ನಡೆದ ಮಾತುಕತೆ ಏನಾಯ್ತು ಎಂದು ಪ್ರಶ್ನಿಸುತ್ತಿದ್ದೇನೆ. ಯೋಗೇಶ್ವರ್ ಬಗ್ಗೆ ಗೊತ್ತಿದ್ದೂ ಅವರನ್ನು ಮಂತ್ರಿ ಮಾಡುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಯಡಿಯೂರಪ್ಪನವರ ಕುಟುಂಬ ರಾಜಕಾರಣ ಹೆಚ್ಚುತ್ತಿದೆ. ಪ್ರಧಾನಿ ಮೋದಿಯವರು ಕುಟುಂಬ ರಾಜಕಾರಣವನ್ನು ಟೀಕಿಸುತ್ತಾರೆ ಆದರೆ ಬಿ.ಎಸ್ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ರಾಜಕಾರಣದಲ್ಲಿಲ್ವಾ? ಈಶ್ವರಪ್ಪನವರ ಕುಟುಂಬ ರಾಜಕಾರಣದಿಂದ ಹೊರತಾಗಿದೆಯಾ? ಈ ಬಗ್ಗೆ ಯಾಕೆ ಏನೂ ಹೇಳುವುದಿಲ್ಲ? ಯಡಿಯೂರಪ್ಪನವರ ಬದುಕು ಬಾಲನಾಗಮ್ಮನ ಕಥೆಯಂತಾಗಿದೆ. ಅವರ ಜೀವ ವಿಜಯೇಂದ್ರ ಕೈಲಿದೆ. ಇಂದಿಗೂ ನನಗೆ ಯಡಿಯೂರಪ್ಪ ಬಗ್ಗೆ ಕಳಕಳಿಯಿದೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ