Latest

*ಎಚ್3ಎನ್2: ರಾಜ್ಯದಲ್ಲಿ ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ*

ವೈರಸ್ ಸೋಂಕಿನ ಬಗ್ಗೆ ಭಯಪಡುವ ಅಗತ್ಯವಿಲ್ಲ: ಸಚಿವ ಡಾ. ಸುಧಾಕರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದಲ್ಲಿ H3N2 ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ಸಭೆ ನಡೆಸಿದರು.

ರಾಜ್ಯದಲ್ಲಿ 26 ಜನರಿಗೆ ಸೋಂಕು ಪತ್ತೆಯಾಗಿದೆ ಎಂದು ಸಚಿವರು ತಿಳಿಸಿದರು.

ತಜ್ಞರನ್ನು ಒಳಗೊಂಡಿರುವ ತಾಂತ್ರಿಕ ಸಲಹಾ ಸಮಿತಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಎಚ್3ಎನ್2 ವೈರಸ್ ಸೋಂಕಿನ ಬಗ್ಗೆ ಭಯಪಡುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕೆ ಅಗತ್ಯ. ಈ ಕುರಿತು ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

Home add -Advt

ಎಲ್ಲಾ ಆಸ್ಪತ್ರೆಗಳ ಆರೋಗ್ಯ ಸಿಬಂದಿಗಳಿಗೆ ತಕ್ಷಣದಿಂದಲೇ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು. ಮಕ್ಕಳು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರು H3N2 ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಜನಸಂದಣಿಯಿಂದ ದೂರವಿರಬೇಕು. 15 ವರ್ಷದೊಳಗಿನ ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬಹುಬೇಗ ಸೋಂಕು ತಗುಲಬಹುದು. ಅಂತವರು ಎಚ್ಚರಿಕೆಯಿಂದಿರಬೇಕು. ಗುಂಪು ಸೇರುವಲ್ಲಿ ಹೋಗಬಾರದು. ಪದೇ ಪದೆ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಆರೋಗ್ಯ ಸಿಬ್ಬಂದಿಗೆ ಅಗತ್ಯ ಲಸಿಕೆ ತೆಗೆದುಕೊಳ್ಳಲು ಸೂಚನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಕೇಂದ್ರ ಸರಕಾರವು ತನ್ನ ಮಾರ್ಗಸೂಚಿಗಳಲ್ಲಿ ಪರೀಕ್ಷೆಗಳ ಗುರಿಯನ್ನು ತಿಳಿಸಿದೆ. ನಾವು ವಿಕ್ಟೋರಿಯಾ ಮತ್ತು ವಾಣಿ ವಿಲಾಸ ಆಸ್ಪತ್ರೆಗಳಲ್ಲಿ ತೀವ್ರವಾದ ಉಸಿರಾಟದ ಸೋಂಕುಗಳು ಮತ್ತು ಇನ್ಫ್ಲುಯೆಂಜಾ ತರಹದ ಅನಾರೋಗ್ಯ ಪ್ರಕರಣಗಳನ್ನು ಪರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.

ಹಲವರು ಆಂಟಿಬಯೋಟಿಕ್ ಮಾತ್ರೆಗಳನ್ನು ತಾವಾಗಿಯೇ ಸೇವಿಸುತ್ತಿದ್ದಾರೆ. ವೈದ್ಯರ ಸಲಹೆಯಿಲ್ಲದೆ ಔಷಧ ಸೇವಿಸುವುದು, ಅನಗತ್ಯವಾಗಿ ಆಂಟಿಬಯೋಟಿಕ್ ಸೇವನೆ ಮಾಡುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದು, ರೋಗ ಲಕ್ಷಣಗಳ ಆಧಾರದ ಮೇಲೆ ಔಷಧ ನೀಡಬೇಕಾಗುತ್ತದೆ, ಔಷಧದ ಕೊರತೆ ಇಲ್ಲ, ಅಗತ್ಯ ಔಷಧಗಳನ್ನು ದಾಸ್ತಾನು ಮಾಡಲಾಗಿದೆ ಎಂದರು.

ಬೇಸಿಗೆ ಆರಂಭಕ್ಕೂ ಮುನ್ನ ಫೆಬ್ರುವರಿ ತಿಂಗಳಿನಲ್ಲಿಯೇ ತಾಪಮಾನ ಹೆಚ್ಚಿದೆ ಎಂದು ತಿಳಿಸಿದ ಸಚಿವರು, ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಬಿಸಿಲಿನಲ್ಲಿ ಹೋಗದಂತೆ ಕನಿಷ್ಠ 2-3 ಲೀಟರ್ ನೀರು, ಮಜ್ಜಿಗೆ, ಎಳನೀರು, ಹಣ್ಣು ಹಂಪಲುಗಳ ರಸಗಳನ್ನು ಸೇವಿಸಿ ಎಂದು ಸಲಹೆ ನೀಡಿದರು.

ಈ ಸೋಂಕು 2-5 ದಿನಗಳಲ್ಲಿ ಮಾಯವಾಗುತ್ತದೆ. ಈ ಹಿಂದೆ ಕೋವಿಡ್‌ಗೆ ಒಳಗಾದವರಿಗೆ ಸೋಂಕು ತಗುಲಿದಾಗ ಹೆಚ್ಚು ಕೆಮ್ಮು ಕಾಣಿಸಿಕೊಳ್ಳುತ್ತದೆ. ಬೆಂಗಳೂರಿನಲ್ಲಿ ಈ ಸೋಂಕಿನ ಎರಡು ಪ್ರಕರಣಗಳು ಪತ್ತೆಯಾಗಿವೆ. ನಿರಂತರ ಕೆಮ್ಮು, ಕೆಲವೊಮ್ಮೆ ಜ್ವರದೊಂದಿಗೆ, ಕಳೆದ ಎರಡು ಮೂರು ತಿಂಗಳುಗಳಿಂದ ದೇಶಾದ್ಯಂತ ವರದಿಯಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ

Related Articles

Back to top button