Kannada NewsKarnataka NewsLatest

*ಹನೂರು ಎನ್ ಕೌಂಟರ್ ಕೇಸ್: ಸ್ಫೋಟಕ ಮಾಹಿತಿ ಬಹಿರಂಗ*

ಪ್ರಗತಿವಾಹಿನಿ ಸುದ್ದಿ: ಚಾಮರಾಜನಗ್ರದ ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯಿಂದ ನಡೆದ ಮೂವರ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಮೃತರ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿ ಲಭ್ಯವಾಗಿದೆ.

ಮೃತರ ಒಳ ಉಡುಪಿನಲ್ಲಿ ಪ್ರೈಮರ್ ಗಳು ಪತ್ತೆಯಾಗಿವೆ. ಮೈಸೂರಿನ ಕೆಆರ್​ ಆಸ್ಪತ್ರೆಯಲ್ಲಿ ಮೃತ ಅಂತೋನಿಸ್ವಾಮಿ, ಪೀಟರ್ ಮತ್ತು ಕುಮಾರ್​​ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಮೃತರ ದೇಹದ ಯಾವ ಭಾಗಗಳಿಗೆ ಗುಂಡುಗಳು ತಗುಲಿವೆ ಹಾಗೂ ಎಷ್ಟು ಇಂಚು ಆಳಕ್ಕೆ ನುಗ್ಗಿವೆ ಎಂಬ ಸೂಕ್ಷ್ಮ ವಿವರಗಳನ್ನು ಸ್ಪಷ್ಟವಾಗಿ ದಾಖಲಿಸಲಾಗಿದೆ. ಮೂವರ ಎದೆ, ಹೊಟ್ಟೆ ಹಾಗೂ ತೊಡೆಯ ಭಾಗಕ್ಕೆ ಗುಂಡೇಟುಗಳು ಬಿದ್ದಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಇನ್ನೊಂದೆಡೆ, ಎಫ್‌ಎಸ್‌ಎಲ್ ವರದಿಯಲ್ಲಿ ಮತ್ತಷ್ಟು ಗಂಭೀರ ಅಂಶಗಳು ಹೊರಬಂದಿವೆ. ಮೃತ ಅಂತೋನಿಸ್ವಾಮಿ ಮತ್ತು ಪೀಟರ್ ಅವರ ಒಳ ಉಡುಪುಗಳಲ್ಲಿ ಗನ್ ಪೌಡರ್‌ನ ಪ್ರೈಮರ್ ಅಂಶಗಳು ಪತ್ತೆಯಾಗಿವೆ. ಇನ್ನು ಈ ಘಟನೆಯಲ್ಲಿ ಅತ್ಯಂತ ಹತ್ತಿರದಿಂದಲೇ ಗುಂಡಿನ ಚಕಮಕಿ ನಡೆದಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಘಟನೆಯ ದಿನ ಸ್ಥಳದಲ್ಲಿದ್ದ ಹೊಳೆಮುರಿದಟ್ಟಿ ಹಾಗೂ ಬೇಟೆಗಾರರ ಗುಡ್ಡದ ಆ್ಯಂಟಿ ಪೋಚಿಂಗ್ ಕ್ಯಾಂಪ್‌ನ ಒಟ್ಟು 12 ಮಂದಿ ಅರಣ್ಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ಜೊತೆಗೆ ಪ್ರಕರಣದ ಏಕೈಕ ಪ್ರತ್ಯಕ್ಷದರ್ಶಿಯಾದ ಮಹಿಮ್‌ದಾಸ್‌ನ ಹೇಳಿಕೆಯನ್ನೂ ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button