ಪ್ರಗತಿವಾಹಿನಿ ಸುದ್ದಿ: “ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲೇ ಡಿ.5ರಂದು ಹಾಸನದಲ್ಲಿ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ನನ್ನ ನೇತೃತ್ವದಲ್ಲಿಯೇ ಕಾಂಗ್ರೆಸ್ ಪಕ್ಷ ವಹಿಸಿಕೊಳ್ಳಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಭಾನುವಾರ ಮಾತನಾಡಿದರು.
“ಪಕ್ಷದ ಅನೇಕ ನಾಯಕರು, ಮುಖಂಡರು ಹಾಸನದಲ್ಲಿ ಸಮಾವೇಶ ಮಾಡಲು ತಿಳಿಸಿದ್ದಾರೆ. ನಮ್ಮ ಪಕ್ಷದ ವತಿಯಿಂದ ಸಚಿವರುಗಳು, ಜಿಲ್ಲಾ ಮಂತ್ರಿಗಳು ಸಮಾವೇಶದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಮಾವೇಶಕ್ಕೆ ಅನೇಕ ಸಂಘಟನೆಗಳು ಸಮುದಾಯಗಳು ಬೆಂಬಲ ಸೂಚಿಸಿವೆ. ಇವರ ಬೆಂಬಲವನ್ನು ನಾವು ಸ್ವೀಕರಿಸುತ್ತೇವೆ.
ನಾನು ನಾಲ್ಕು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದೆ. ಮುಖ್ಯಮಂತ್ರಿಗಳು ದೆಹಲಿ ಪ್ರವಾಸದಲ್ಲಿದ್ದರು. ದೇಶದಲ್ಲಾಗುತ್ತಿರುವ ವಿದ್ಯಮಾನ ಹಾಗೂ ಸಂವಿಧಾನ ರಕ್ಷಣೆಗೆ ಕಾರ್ಯಕ್ರಮ ರೂಪಿಸಲು ಎಐಸಿಸಿ ನಾಯಕರು ಮಾರ್ಗದರ್ಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ನಾಲ್ಕು ಜಿಲ್ಲೆಗಳ ನಾಯಕರು ಹಾಗೂ ಪದಾಧಿಕಾರಿಗಳ ಜತೆ ಇದರ ಪೂರ್ವಭಾವಿ ಸಭೆಯನ್ನು ಭಾನುವಾರ (ಇಂದು) ಕೆಪಿಸಿಸಿ ಕಚೇರಿಯಲ್ಲಿ ನಡೆಸಲಾಗಿದೆ. ಸಮಾವೇಶಕ್ಕೆ ಪಕ್ಷದ ಎಲ್ಲಾ ನಾಯಕರಿಗೂ ಆಹ್ವಾನ ನೀಡಲಾಗುವುದು.
ಸಮಾನತೆ, ಸಂವಿಧಾನದ ಬಗ್ಗೆ ಗೌರವ ಹೊಂದಿರುವವರು, ಸ್ವಾಭಿಮಾನಿಗಳಿಗೆ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ. ಸಧ್ಯದಲ್ಲೇ ನಾನು ಹಾಗೂ ಕೆಪಿಸಿಸಿ ತಂಡ ಸಮಾವೇಶ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ತಯಾರಿಯನ್ನು ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಲಾಗುವುದು.
ಜನರ ಕಲ್ಯಾಣ, ಸಂವಿಧಾನ ರಕ್ಷಣೆ, ಸ್ವಾಭಿಮಾನ ರಕ್ಷಣೆ, ಸರ್ಕಾರದ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಸಮಾವೇಶ ಮಾಡಲಾಗುತ್ತಿದೆ. ಸರ್ಕಾರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ಜನ ಈಗಾಗಲೇ ತೀರ್ಪು ಕೊಟ್ಟಿದ್ದಾರೆ. ಎಐಸಿಸಿ ನಾಯಕರ ನಿರ್ದೇಶನದಂತೆ ಮುಂದಿನ ಎರಡು ತಿಂಗಳ ಕಾಲ ಒಂದಲ್ಲಾ ಒಂದು ರೀತಿ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಈಗಿನಿಂದಲೇ ಪಕ್ಷ ಸಂಘಟನೆ:
ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿನ ಯಶಸ್ಸು ಮುಂದುವರೆಸಿಕೊಂಡು ಹೋಗಲು ಪಕ್ಷ ಸಂಘಟನೆ ಮಾಡಲಾಗುವುದು. ಚುನಾವಣೆ ಬಂದಾಗ ಸಿದ್ಧತೆ ಮಾಡಿಕೊಳ್ಳುವುದಲ್ಲ. ಚುನಾವಣೆ ಮುಗಿದ ಮರು ದಿನದಿಂದಲೇ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು.
ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಪ್ರತಿ ವಿಭಾಗವಾರು ತಲುಪಿಸಲು ಪಕ್ಷವು ತೀರ್ಮಾನ ಮಾಡಿದೆ.
ಎಲ್ಲಿ ಕಳೆದುಕೊಂಡಿದ್ದೇವೆಯೋ ಅಲ್ಲಿಯೇ ಅದನ್ನು ಹುಡುಕಬೇಕು ಎನ್ನುವುದು ನಮ್ಮ ತತ್ವ. ಹಾಸನದಲ್ಲಿ ಒಂದು ವಿಧಾನಸಭಾ ಕ್ಷೇತ್ರವನ್ನು ಗೆದ್ದಿದ್ದೆವು. ಆದರೆ ಲೋಕಸಭೆಯಲ್ಲಿ ಜನ ಶಕ್ತಿ ತುಂಬಿದರು. ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಅತ್ಯಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದ್ದೇವೆ. ಒಂದಷ್ಟು ಕಡೆ ಲೋಕಸಭೆಯಲ್ಲಿ ಸೋತಿದ್ದೇವೆ.
ಶೀಘ್ರದಲ್ಲಿಯೇ ಸಂಡೂರು, ಶಿಗ್ಗಾವಿಯಲ್ಲಿ ಮತದಾರರರಿಗೆ ಕೃತಜ್ಞತಾ ಸಮಾವೇಶವನ್ನು ಆಯೋಜಿಸುವ ಕುರಿತು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಲಾಗಿದೆ. ವಿಧಾನಸಭಾ ಅಧಿವೇಶನ ನಡೆಯುವ ಮಧ್ಯಲ್ಲಿಯೇ ಭಾನುವಾರದಂದು ಚನ್ನಪಟ್ಟಣದಲ್ಲಿ ಅಭಿನಂದನಾ ಸಮಾವೇಶ ಆಯೋಜಿಸುವಂತೆ ಸುರೇಶ್ ಹಾಗೂ ಯೋಗೇಶ್ವರ್ ಅವರಿಗೆ ಸೂಚಿಸಿದ್ದೇವೆ.”
ಪ್ರಶ್ನೋತ್ತರ
ಕೆಲ ಸಚಿವರು ಈ ಸಮಾವೇಶಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದು, ಈಗ ಸಮಾವೇಶದ ಸ್ವರೂಪ ಬದಲಾಗಿದ್ದು ಏಕೆ ಎಂದು ಕೇಳಿದಾಗ, “ಈ ಸಮಾವೇಶದ ಸ್ವರೂಪ ಎಲ್ಲಿ ನಿರ್ಧಾರವಾಗಿತ್ತು? ಪಕ್ಷದ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳೇ ಹೊರತು ಮೈತ್ರಿ ಪಕ್ಷದ ಸಿಎಂ ಅಲ್ಲ. ಇಲ್ಲಿ ಒಂದೇ ಪಕ್ಷ, ಒಂದೇ ಚಿಹ್ನೆ ಇದೆ. ಕೆಲವರ ವೈಯಕ್ತಿಕ ಅಭಿಪ್ರಾಯವೇ ಬೇರೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜತೆ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.
ಕೆಲ ಸಚಿವರು ಮೈಸೂರು ಜಿಲ್ಲಾಧ್ಯಕ್ಷರ ಜತೆ ಪ್ರತ್ಯೇಕ ಸಭೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಕೊನೆ ಘಳಿಗೆಯಲ್ಲಿ ಈ ಸಭೆ ತೀರ್ಮಾನ ಮಾಡಲಾಗಿದೆ. ನಿನ್ನೆ ದೆಹಲಿಯಿಂದ ಆಗಮಿಸಿ ಮಹಾತ್ಮಾ ಗಾಂಧೀಜಿ ಅವರ ಕಾರ್ಯಕ್ರಮದ ಸಭೆ ಮಾಡಿದ್ದೇನೆ. ನಮ್ಮ ಬಳಿ ಅನುಮತಿ ಪಡೆದೆ ಆ ನಾಯಕರು ಮೈಸೂರಿನಲ್ಲಿ ಸಭೆ ಮಾಡುತ್ತಿದ್ದಾರೆ. ನೀವುಗಳು (ಮಾಧ್ಯಮ ಪ್ರತಿನಿಧಿಗಳು) ನಿಮ್ಮ ಮಾಧ್ಯಮ ಸಂಸ್ಥೆಗಳಿಗಿಂತ ಹೇಗೆ ದೊಡ್ಡವರಲ್ಲವೋ, ಹಾಗೆ ನಾವುಗಳು ಪಕ್ಷಕ್ಕಿಂತ ದೊಡ್ಡವರಲ್ಲ. ಎಲ್ಲರಿಗಿಂತ ಪಕ್ಷ ದೊಡ್ಡದು ಎಂದು ಎಲ್ಲರಿಗೂ ಗೊತ್ತಿದೆ” ಎಂದು ತಿಳಿಸಿದರು.
ಹೈಕಮಾಂಡ್ ಗೆ ಹೋಗಿರುವ ಅನಾಮಧೇಯ ಪತ್ರ ಇಷ್ಟೆಲ್ಲಾ ಕೆಲಸ ಮಾಡಿದೆಯೇ ಎಂದು ಕೇಳಿದಾಗ, “ನನಗೆ ಯಾವ ಪತ್ರದ ಬಗ್ಗೆ ಗೊತ್ತಿಲ್ಲ. ಎಐಸಿಸಿ ಅಧ್ಯಕ್ಷರಿಗೆ ಬರೆಯಯಲಾಗಿದೆ ಎಂಬ ಪತ್ರ ಯಾರ ಸೃಷ್ಟಿಯೋ ಗೊತ್ತಿಲ್ಲ. ಯಾರೂ ಕೂಡ ನನ್ನ ಬಳಿ ಈ ವಿಚಾರವಾಗಿ ಚರ್ಚೆ ಮಾಡಿಲ್ಲ” ಎಂದು ತಿಳಿಸಿದರು.
ಸಚಿವ ಚಲುವರಾಯಸ್ವಾಮಿ ಅವರು ಸಭೆಯಿಂದ ಬೇಗ ನಿರ್ಗಮಿಸಿದರು ಎಂದು ಕೇಳಿದಾಗ, “ಅವರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯುತ್ತಿದೆ. ಅವರಿಗೆ ಪೂರ್ವನಿಗದಿತ ಕಾರ್ಯಕ್ರಮ ಇದ್ದ ಕಾರಣ ಅವರು ಬೇಗ ಹೊರಟಿದ್ದಾರೆ. ಈ ಸಭೆಯಲ್ಲಿ ಅವರು ಮೊದಲು ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡು ನಂತರ ತೆರಳಿದ್ದಾರೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ