ಪ್ರಗತಿವಾಹಿನಿ ಸುದ್ದಿ; ಹಾಸನ: ಹಾಸನದಲ್ಲಿ ಕೊರೊನಾ ಸೋಂಕಿತನ ಜೊತೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಕೊವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಹಾಸನ ಜಿಲ್ಲೆ ಮಲ್ಲಿಪಟ್ಟಣದ ಸರ್ಕಾರಿ ಶಾಲೆಯ ಕೊಠಡಿ ನಂಬರ್ ಒಂದರಲ್ಲಿ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದನು. ಈ ಕೊಠಡಿಯಲ್ಲಿ ಒಟ್ಟು 19 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸೋಂಕಿತನನ್ನು ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ. ಹಾಗೆ ಕೊಠಡಿಯಲ್ಲಿ ಆತನ ಜೊತೆಯಲ್ಲಿದ್ದ 19 ವಿದ್ಯಾರ್ಥಿ, ಓರ್ವ ಶಿಕ್ಷಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ನೆಗೆಟೀವ್ ಬಂದಿದ್ದು ಎಲ್ಲರ ಆತಂಕ ದೂರವಾಗಿದೆ.
ಈ ನಡುವೆ ಜಿಲ್ಲೆಯಲ್ಲಿ ಇಂದು 31 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ ಹಾಸನದಲ್ಲಿ ಇದುವರೆಗೂ ಒಟ್ಟು 360 ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 238 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 120 ಪ್ರಕರಣಗಳು ಸಕ್ರಿಯವಾಗಿವೆ ಎಂದು ಡಿಎಚ್‍ಓ ಸತೀಶ್ ತಿಳಿಸಿದ್ದಾರೆ.
ಇಂದು 65 ವರ್ಷದ ವೃದ್ಧೆ ಹಾಸನದಲ್ಲಿ ಕೊರೊನಾದಿಂದ ಮೃತಪಟ್ಟಿದ್ದು, ಇದುವರೆಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಸಮುದಾಯಿಕ ಪರೀಕ್ಷೆ ಮತ್ತೆ ಮುಂದುವರೆಸಿದ್ದೇವೆ. ಪ್ರತಿದಿನ ಇಡೀ ಜಿಲ್ಲೆಯಲ್ಲಿ 400 ಕ್ಕೂ ಹೆಚ್ಚು ಮಂದಿಯ ಸ್ಯಾಂಪಲ್ ತೆಗೆಯಲಾಗುತ್ತಿದೆ ಎಂದು ಡಿಎಚ್‍ಓ ಸತೀಶ್ ಮಾಹಿತಿ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ