Belagavi NewsBelgaum NewsCrimeKannada NewsKarnataka NewsNationalPolitics

*ಬೆಳಗಾವಿಯಲ್ಲಿ ಆರೋಗ್ಯಾಧಿಕಾರಿ, ಸಿಬ್ಬಂದಿ ಲೋಕಾಯುಕ್ತ ಬಲೆಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪೌಲ್ಟ್ರಿ ಫಾರ್ಮ್‌ ಆರಂಭಿಸಲು ನಿರಾಕ್ಷೇಪಣಾ ಪತ್ರ (NOC) ನೀಡಲು ₹6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಖಾನಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಕಚೇರಿ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಾನಾಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಂಜೆ ಈ ಕಾರ್ಯಾಚರಣೆ ನಡೆದಿದೆ.

ಲೋಕಾಯುಕ್ತ ಬಲೆಗೆ ಸಿಲುಕಿದವರನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಡಿವಾಳಪ್ಪ (ಮಹೇಶ) ಕಿವಡಸಣ್ಣವರ ಹಾಗೂ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಬೀರಪ್ಪ ರಾಜಾಪುರೆ ಎಂದು ಗುರುತಿಸಲಾಗಿದೆ.

ಕಾಮಶಿನಕೊಪ್ಪ ಗ್ರಾಮದ ಮಾಜಿ ಸೈನಿಕ ಉದಯ ಬಾಳಪ್ಪ ಚವಲಗಿ ಅವರು ತಮ್ಮ ಜಮೀನಿನಲ್ಲಿ ಪತ್ನಿಯ ಹೆಸರಿನಲ್ಲಿ ಪೌಲ್ಟ್ರಿ ಫಾರ್ಮ್ ಆರಂಭಿಸಲು NOC ಕೋರಿ ಆರೋಗ್ಯಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ NOC ನೀಡಲು ₹6 ಸಾವಿರ ಲಂಚದ ಬೇಡಿಕೆ ಇಡಲಾಗಿದೆ ಎಂದು ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆರೋಗ್ಯಾಧಿಕಾರಿಯ ಸೂಚನೆಯ ಮೇರೆಗೆ ದ್ವಿತೀಯ ದರ್ಜೆ ಸಹಾಯಕ ಬೀರಪ್ಪ ರಾಜಾಪುರೆ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ₹6 ಸಾವಿರ ಲಂಚದ ಹಣದ ಸಮೇತ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.

ಲೋಕಾಯುಕ್ತ ಉಪಾಧೀಕ್ಷಕ ಬಿ.ಎಸ್. ಪಾಟೀಲ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಗುರುರಾಜ, ವೆಂಕಟೇಶ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲಂಚ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

Back to top button