Kannada NewsKarnataka NewsLatest

ಮಲಪ್ರಭಾ ನದಿಗೆ ಬಂತು ಮಹಾಪೂರ, ಸತತಧಾರೆಗೆ ನಲುಗಿದ ಖಾನಾಪುರ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಜಡಿಮಳೆ ತಾಲೂಕಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯ ಕಾರಣ ಮಲಪ್ರಭಾ ನದಿಗೆ ಮಹಾಪೂರ ಬರತೊಡಗಿದೆ. ಸತತಧಾರೆಯ ಪರಿಣಾಮ ತಾಲೂಕಿನಲ್ಲಿ ಹರಿಯುವ ಎಲ್ಲ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ತಾಲೂಕಿನ ಕಾನನದಂಚಿನ ಕಣಕುಂಬಿ, ಗುಂಜಿ, ಲೋಂಡಾ ಮತ್ತು ಜಾಂಬೋಟಿ ಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆಗಳ ಮೇಲೆ ನೀರು ಹರಿಯುತ್ತಿರುವ ಕಾರಣ ೬೦ ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಳೆದುಕೊಂಡಿವೆ.
ತಾಲೂಕಿನಾದ್ಯಂತ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ, ಪಾಂಡರಿ, ಮಹದಾಯಿ ನದಿಗಳು, ಕೋಟ್ನಿ, ಅಲಾತ್ರಿ, ಮಂಗೇತ್ರಿ, ಕುಂಬಾರ, ತಟ್ಟೀ, ಪಣಸೂರಿ, ಬೈಲ್, ಕಳಸಾ, ಕರೀಕಟ್ಟಿ ಹಾಗೂ ಬಂಡೂರಿ ಹಳ್ಳಗಳು ಪ್ರವಾಹೋಪಾದಿಯಲ್ಲಿ ಉಕ್ಕಿ ಹರಿಯುತ್ತಿವೆ.

ನಾಗರಗಾಳಿ, ಗುಂಜಿ, ಲೋಂಡಾ, ಹೆಮ್ಮಡಗಾ, ನೇರಸೆ, ನೀಲಾವಡೆ, ಜಾಂಬೋಟಿ ಮತ್ತು ಕಣಕುಂಬಿ ಅರಣ್ಯಪ್ರದೇಶದ ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿದುಕೊಂಡು ನಡುಗಡ್ಡೆಯಾಗಿ ಮಾರ್ಪಟ್ಟಿವೆ. ಸತತವಾಗಿ ರಭಸದಿಂದ ಸುರಿಯುತ್ತಿರುವ ಮಳೆಯಿಂದಾಗಿ ನೀಲಾವಡೆ-ಮಳವ, ದಾರೋಳಿ-ಮೋದೆಕೊಪ್ಪ, ಕುಸಮಳಿ-ಜಾಂಬೋಟಿ, ಕರಂಬಳ-ಚಾಪಗಾಂವ, ಅಸೋಗಾ-ಭೋಸಗಾಳಿ, ತೋರಾಳಿ-ಹಬ್ಬನಹಟ್ಟಿ, ಅಮಟೆ-ಗೋಲ್ಯಾಳಿ, ಚಾಪಗಾಂವ-ಯಡೋಗಾ, ಚಿಕ್ಕಮುನವಳ್ಳಿ-ಚಿಕ್ಕಹಟ್ಟಿಹೊಳಿ, ಪಾರವಾಡ-ಕಣಕುಂಬಿ, ದೇಗಾಂವ-ಹೆಮ್ಮಡಗಾ, ಗುಂಜಿ-ಅಂಬೇವಾಡಿ, ಕಾಮತಗಾ-ಕಾಪೋಲಿ, ಜಾಂಬೋಟಿ-ಚಾಪೋಲಿ, ಅಬನಾಳಿ-ಡೊಂಗರಗಾಂವ, ಶಿರೋಲಿ-ತಿವೋಲಿ, ಕುಪ್ಪಟಗಿರಿ-ಖಾನಾಪುರ, ಮೋದೆಕೊಪ್ಪ-ಕೌಲಾಪುರವಾಡಾ ಮಾರ್ಗಗಳಲ್ಲಿರುವ ನದಿ, ಹಳ್ಳ-ಕೊಳ್ಳಗಳ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಈ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.

ಸಂಪರ್ಕ ರಸ್ತೆ, ಸೇತುವೆಗಳ ಜಲಾವೃತ ಮತ್ತು ವಿದ್ಯುತ್ ಕಡಿತ ಸೇರಿದಂತೆ ಗುರುವಾರದ ಮಳೆ ತಾಲೂಕಿನ ಜನರ ನಿದ್ದೆಗೆಡಿಸಿದೆ. ಮಳೆಯ ಕಾರಣ ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ. ಜಲಮೂಲಗಳು ಬಹುತೇಕ ಭರ್ತಿಯಾಗಿರುವ ಕಾರಣ ಕೆಲವೆಡೆ ಪ್ರವಾಹದ ಭೀತಿ ನಿರ್ಮಾಣವಾಗಿದೆ. ಕೃಷಿ ಜಮೀನುಗಳು ಜಲಾವೃತಗೊಂಡಿವೆ.
ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಗುರುವಾರದವರೆಗೆ ತಾಲೂಕಿನ ಕಣಕುಂಬಿಯಲ್ಲಿ ೧೬.೮ ಸೆಂ.ಮೀ, ಜಾಂಬೋಟಿಯಲ್ಲಿ ೯.೫ ಸೆಂ.ಮೀ, ಅಸೋಗಾ ೬.೪ ಸೆಂ.ಮೀ, ಗುಂಜಿ ೬.೨ ಸೆಂ.ಮೀ, ಲೋಂಡಾ ೭.೬ ಸೆಂ.ಮೀ, ಖಾನಾಪುರ ಪಟ್ಟಣ ೪ ಸೆಂ.ಮೀ, ನಾಗರಗಾಳಿ ೫.೮ ಸೆಂ.ಮೀ, ಕಕ್ಕೇರಿ ೪.೫ ಸೆಂ.ಮೀ ಮತ್ತು ಬೀಡಿ ಭಾಗದಲ್ಲಿ ೪.೭ ಸೆಂ.ಮೀಗಳಷ್ಟು ಮಳೆ ಸುರಿದಿದೆ.

ಮಹಾರಾಷ್ಟ್ರ : ರೈಲಿನಲ್ಲೇ ಸಿಲುಕಿದ 6,000 ಪ್ರಯಾಣಿಕರು; ಆಹಾರ, ನೀರು ಪೂರೈಕೆ

43 ತಹಸಿಲ್ದಾರ್, 12 ಸಬ್ ರಜಿಸ್ಟ್ರಾರ್, 30 ಆರ್ ಎಫ್ ಒ ಟ್ರಾನ್ಸಫರ್ (ಸಮಗ್ರ ವಿವರ ಇಲ್ಲಿದೆ)

ಅದೇ ದಿನ ಯಡಿಯೂರಪ್ಪ ರಾಜಿನಾಮೆ?: ರಾಜ್ಯಪಾಲರ ಭೇಟಿಗೆ ಸಮಯ ನಿಗದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button