*ಮುಂದಿನ 72 ಗಂಟೆ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ*
ಪ್ರಗತಿವಾಹಿನಿ ಸುದ್ದಿ: ಈ ವರ್ಷ ಮಳೆ ಭೀಕರ ಪ್ರವಾಹ ಮತ್ತು ನೆರೆ ಪರಿಸ್ಥಿತಿ ನಿರ್ಮಾಣ ಮಾಡಿ ಭಯಪಡಿಸಿದೆ. ಇಂತಹ ಸಮಯದಲ್ಲೇ ಮತ್ತೆ ಮುಂದಿನ 72 ಗಂಟೆ ಕಾಲ ಅಂದ್ರೆ 3 ದಿನ ಭಾರಿ ರಣಮಳೆ ಬೀಳುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮುಂಗಾರು ಮಳೆ ಮುಕ್ತಾಯ ಆಗಲು ಇನ್ನೂ 2 ತಿಂಗಳು ಬಾಕಿ ಇದೆ. ಅಂದರೆ 2024ರ ಸೆಪ್ಟಂಬರ್ ತಿಂಗಳ ತನಕ ಮುಂಗಾರು ಮಳೆ ಸುರಿಯಲಿದೆ. ಹೀಗಿದ್ದರೂ ಮಳೆರಾಯ ಕೇವಲ 2 ತಿಂಗಳಲ್ಲಿ ಇಡೀ ವರ್ಷಕ್ಕೆ ಆಗುವಷ್ಟು ಮಳೆ ಸುರಿಸಿದ್ದಾನೆ. ಮುಂದಿನ 72 ಗಂಟೆಗಳ ಕಾಲ ಮತ್ತೆ ನಿರಂತರ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ.
ಮುಂಗಾರು ಮಳೆ ಮೋಡಗಳು ಇಷ್ಟುದಿನ ಕರಾವಳಿ, ಮಲೆನಾಡು ಭಾಗದಲ್ಲಿ ಭಯ ಹುಟ್ಟಿಸಿ ಜನರನ್ನು ಸುಸ್ತು ಮಾಡಿವೆ. ಆದರೆ ಇದೀಗ ಉತ್ತರ ಕರ್ನಾಟಕ ಭಾಗದಲ್ಲೂ ಮುಂಗಾರು ಮಳೆ ಆರ್ಭಟಿಸುವುದು ಪಕ್ಕಾ ಆಗಿದೆ. ಬೀದರ್, ಕಲಬುರಗಿ, ರಾಯಚೂರು, ಬಾಗಲಕೋಟೆ ಸೇರಿದಂತೆ ಕೊಪ್ಪಳ, ಬಳ್ಳಾರಿ, ಬೆಳಗಾವಿ, ಗದಗ ಸೇರಿದಂತೆ ಹುಬ್ಬಳ್ಳಿ ಹಾಗೂ ಧಾರವಾಡ ಭಾಗದಲ್ಲೂ ಕೂಡ, ಇದೇ ರೀತಿಯಾಗಿ ವ್ಯಾಪಕವಾಗಿ ಮುಂಗಾರು ಮಳೆ ಬೀಳಲಿದೆ ಎನ್ನಲಾಗಿದೆ.
ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೂಡ ಮುಂದಿನ 3 ದಿನ ಕಾಲ ಭಾರಿ ಮುಂಗಾರು ಮಳೆ ಬೀಳಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮತ್ತೆ ಮಳೆರಾಯ ಆರ್ಭಟಿಸುವುದು ಗ್ಯಾರಂಟಿ. ಇದರ ಜೊತೆಗೆ ಮಲೆನಾಡ ಭಾಗದಲ್ಲೂ ಮಳೆಯ ಆರ್ಭಟ ಮುಂದುವರಿಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ