Latest

ಹಿಜಾಬ್, ಕೇಸರಿ ಶಾಲು ವಿವಾದದ ನಡುವೆ ಕುಂಕುಮ ಅಭಿಯಾನ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತಾರಕಕ್ಕೇರಿರುವ ನಡುವೆಯೇ ಇದೀಗ ಹಿಂದೂ ಮಹಿಳಾ ಸಂಘಟನೆಗಳು ಕಲಬುರ್ಗಿಯಲ್ಲಿ ಕುಂಕುಮ ಅಭಿಯಾನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಉಡುಪಿಯ ಕಾಲೇಜಿನಿಂದ ಆರಂಭವಾದ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ಇದೀಗ ರಾಜ್ಯಾದ್ಯಂತ ವ್ಯಾಪಿಸಿದ್ದು, ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಈ ನಡುವೆ ಕಲಬುರ್ಗಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ದಿವ್ಯಾ ಹಾಗರಗಿ ನೇತೃತ್ವದಲ್ಲಿ ಕಲಬುರ್ಗಿ ಶರಣಬಸವೇಶ್ವರ ದೇಗುಲದ ಕುಂಕುಮ ಅಭಿಯಾನ ನಡೆಸಲಾಯಿತು.

ಅರಿಷಿಣ, ಕುಂಕುಮವಿಟ್ಟು, ಬಳೆ ತೊಡಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ನೂರಾರು ಮಹಿಳೆಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ದಿವ್ಯಾ ಹಾಗರಗಿ, ನಮ್ಮ ಸಂಪ್ರದಾಯ, ಸಂಸ್ಕೃತಿ ಪ್ರತೀಕವಾಗಿರುವ ಅರಿಷಿಣ-ಕುಂಕುಮ ಅಭಿಯಾನ ನಡೆಸಬೇಕು ಎಂಬುದು ಹಲವು ದಿನಗಳ ನನ್ನ ಆಸೆಯಾಗಿತ್ತು. ಇದೀಗ ಶರಣಬಸವೇಶ್ವರ ದೇವಸ್ಥಾನದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಹಿಜಾಬ್ ವಿವಾದಕ್ಕೂ ಈ ಅಭಿಯಾನಕ್ಕೂ ಯಾವುದೇ ಸಂಬಂಧವಿಲ್ಲ. ಹಿಜಾಬ್ ವಿಚಾರ ನ್ಯಾಯಾಲಯದಲ್ಲಿದೆ ಅದರ ಬಗ್ಗೆ ನಾವು ಮಾತಾಡುತ್ತಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಸೋಮವಾರ, ಮಂಗಳವಾರ ಹೀಗೆ ಒಂದೊಂದು ದಿನ ಒಂದೊಂದು ದೇವಸ್ಥಾನದಲ್ಲಿ 100-150 ಮಹಿಳೆಯರು ಸೇರಿ ಕುಂಕುಮ ಚಳುವಳಿ ಮಾಡಲು ನಿರ್ಧರಿಸಿದ್ದೇವೆ. ಅಭಿಯಾನ ಜಿಲ್ಲೆಯಲ್ಲಿ ಮುಂದುವರೆಯಲಿದೆ ಎಂದರು.

ಇನ್ನು ಹಿಜಾಬ್ ಅನ್ನುವುದು ಒಂದು ವ್ಯವಸ್ಥೆಯಷ್ಟೇ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ, ತಮ್ಮ ಭವಿಷ್ಯ, ಸಾಧನೆಗಳ ಬಗ್ಗೆ ಗಮನಕೊಡಬೇಕು ಹೊರತು ಬುರ್ಖಾ, ಹಿಜಾಬ್ ಎಂದು ಹಿಜಾಬ್ ವ್ಯವಸ್ಥೆಯನ್ನು ಧರ್ಮ, ಹಕ್ಕುಗಳ ಬಣ್ಣ ಹಚ್ಚುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು. ನಾವು ನಡೆಸುತ್ತಿರುವ ಕುಂಕುಮ ಚಳುವಳಿಗೂ, ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.
ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟ ಕಾಂಗ್ರೆಸ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button