Latest

ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶಕ್ಕೆ ತಡೆ ನೀಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ತುರ್ತು ವಿಚಾರಣೆ ಅಗತ್ಯವಿಲ್ಲ ಎಂದು ಹೇಳಿದೆ.

ಹಿಜಾಬ್ ವಿವಾದ ಕುರಿತು ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ನೇತೃತ್ವದ ತ್ರಿಸದಸ್ಯ ಪೀಠ, ಮುಂದಿನ ಆದೇಶದವರೆಗೂ ಶಾಲಾ-ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಗುರುತು ಬಳಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಇದೀಗ ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಕೋರಿ ಹಿರಿಯ ವಕೀಲ ದೇವದತ್ ಕಾಮತ್ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ತ್ವರಿತ ವಿಚಾರಣೆಗೂ ಮನವಿ ಮಾಡಿದ್ದಾರೆ.

ಮುಂದಿನ ಆದೇಶದವರೆಗೂ ಧಾರ್ಮಿಕ ಗುರುತು ಧರಿಸದಂತೆ ಹೈಕೋರ್ಟ್ ನೀಡಿರುವ ಆದೇಶದಿಂದ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಬಹುದು. ಸಂವಿಧಾನದ 25ನೇ ವಿಧಿಯಡಿ ನೀಡುವ ಹಕ್ಕು ಸಿಗುವುದಿಲ್ಲ ಎಂದು ವಾದ ಮಂಡಿಸಿದ್ದಾರೆ.

ದೇವದತ್ತ್ ಕಾಮತ್ ವಾದ ಆಲಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪು ಬರುವವರೆಗೂ ಯಾವುದೇ ತ್ವರಿತ ವಿಚಾರಣೆ ಅಥವಾ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ. ಹೈಕೋರ್ಟ್ ತೀರ್ಪು ಬರುವವರೆಗೂ ಕಾಯಬೇಕು. ನಂತರ ಮೇಲ್ಮನವಿ ಅರ್ಜಿ ಸಲ್ಲಿಸಿ ಎಂದು ಸೂಚಿಸಿದೆ.

ಹೈಕೋರ್ಟ್ ವಿಚಾರಣೆಯನ್ನು ನಾವೂ ಕೂಡ ಗಮನಿಸುತ್ತೇವೆ. ವಿದ್ಯಾರ್ಥಿಗಳ ಯಾವುದಾದರೂ ಪರೀಕ್ಷೆಗಳಿಗೆ ತೊಂದರೆಯಾಗುವುದಿದ್ದರೆ ಮಾತ್ರ ವಿಚಾರಣೆ ನಡೆಸುತ್ತೇವೆ. ಅಲ್ಲದೇ ಹಿಜಾಬ್ ವಿವಾದ ದೊಡ್ಡ ವಿಷಯ ಮಾಡುವುದು ಸರಿಯಲ್ಲ, ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದೆ.

ನಿವೃತ್ತ ASI ಬರ್ಬರ ಹತ್ಯೆ; ಮಗನಿಂದಲೇ ಕೃತ್ಯ; ಕಾರಣವೇನು ಗೊತ್ತೇ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button