ಪ್ರಗತಿ ವಾಹಿನಿ ಸುದ್ದಿ, ಗೋಕಾಕ: ಬರುವ ಜನವರಿ 4 ಮತ್ತು 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮನ್ನಿಕೇರಿಯ ಶ್ರೀ ಮಹಾಂತಲಿಂಗೇಶ್ವರ ಮಠದಲ್ಲಿ ವಿಶ್ವ ಹಿಂದೂ ಅಂತರ್ಜಾತಿ ವಿವಾಹಿತರ ಸಮಾವೇಶ ನಡೆಯಲಿದೆ ಎಂದು ವಿಶ್ವ ಹಿಂದೂ ಅಂತರ್ಜಾತಿ ವಿವಾಹ ಪ್ರೋತ್ಸಹ ಸಂಘದ ಗೌರವಾಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದ್ದಾರೆ.
ಲವ್ ಜಿಹಾದ್ ನಂಥ ಪ್ರಕರಣಗಳನ್ನು ಮತ್ತು ಹಿಂದುಗಳು ಮತಾಂತರವಾಗುವುದನ್ನು ತಡೆಗಟ್ಟಲು ಹಾಗೂ ಹಿಂದುಗಳಲ್ಲಿನ ಮೇಲು ಕೀಳು ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು 11.1.2021 ರಂದು ಮನ್ನಿಕೇರಿಯಲ್ಲಿ ರಾಜ್ಯ ಮಟ್ಟದ ಈ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಇದುವರೆಗೆ ಮೂವತ್ತು ಸಾವಿರಕ್ಕೂ ಹೆಚ್ಚು ಅಂತರ್ಜಾತಿ ವಿವಾಹಿತರು ಸದಸ್ಯರಾಗಿದ್ದಾರೆ.
ಸಂಘದ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಸಮಾವೇಶ ನಡೆಯಲಿದೆ. 4.1.2023 ರ ಬುಧವಾರ ಬೆಳಿಗ್ಗೆ 10 ಘಂಟೆಗೆ ಅಂತರ್ಜಾತಿ ವಿವಾಹಿತರ ಸ್ನೇಹಸಮ್ಮೇಳನವನ್ನು ಸತೀಶ ಜಾರಕಿಹೊಳಿ ಉದ್ಘಾಟಿಸುವರು.
ಮಠದ ಅಧ್ಯಕ್ಷ ವಿಜಯಸಿದ್ಧೇಶ್ವರ ಸ್ವಾಮೀಜಿ, ಡಾ. ಆರೂಢಭಾರತೀ ಸ್ವಾಮೀಜಿ ಮೊದಲಾದವರು ಪಾಲ್ಗೊಳ್ಳುವರು. ರಾತ್ರಿ 7.30ಕ್ಕೆ ವಿರಾಟ್ ಹಿಂದೂ ಧರ್ಮ ಜಾಗೃತಿಯ ಸಮಾವೇಶ ನಡೆಯಲಿದ್ದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು.
ಖ್ಯಾತ ವಾಗ್ಮಿ ಜಗದೀಶ್ ಕಾರಂತ ಮಾತನಾಡುವರು. ಹಲವಾರು ಸ್ವಾಮೀಜಿಗಳು, ಸಂಸದ ಈರಣ್ಣ ಕಡಾಡಿ ಭಾಗವಹಿಸುವರು. ಜಾತ್ಯಾತೀತ ಜ್ಯೋತಿ ಪ್ರಶಸ್ತಿ ನೀಡಲಾಗುವುದು.
5.1.2023 ರಂದು ಬೆಳಿಗ್ಗೆ 9 ಘಂಟೆಗೆ ಸಹಭೋಜನವಿದೆ. 10 ಘಂಟೆಗೆ ಅಂತರ್ಜಾತಿ ವಿವಾಹಿತ ಹಿಂದೂ ಮಾತೆಯರಿಗೆ ಉಡಿ ತುಂಬಲಾಗುವುದು. 10.30 ಕ್ಕೆ ಮಠದ ಸಭಾಭವನ, ಪ್ರಸಾದ ನಿಲಯ, ಹಾಗೂ ಅತಿಥಿಗೃಹಗಳ ಉದ್ಘಾಟನೆ ನೆರವೇರಲಿದೆ.
11 ಘಂಟೆಗೆ ಜಾತ್ಯತೀತ ಹಿಂದೂ ಸಮಾವೇಶವನ್ನು ಕಣೇರಿ ಮಠದ ಜಗದ್ಗುರು ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸುವರು. ಶಾಸಕ ಬಾಲಚಂದ್ರ ಜಾರಕಿಹೊಳಿ, ಸಚಿವೆ ಶಶಿಕಲಾ ಜೊಲ್ಲೆ ಮೊದಲಾದ ಗಣ್ಯರು ಹಲವು ಸ್ವಾಮೀಜಿಗಳು ಭಾಗವಹಿಸುವರು.
ವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ ಮಾತನಾಡುವರು. ರಾಜ್ಯದಾದ್ಯಂತದಿಂದ ಅಂದಾಜು ಹತ್ತು ಸಾವಿರ ಜನ ಸದಸ್ಯರು ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://pragati.taskdun.com/cm-basavaraj-bommaiamith-shahcooperative-convention/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ