ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಗಳನ್ನು ಗುರಿಯಾಗಿಸಿಕೊಂಡು ರೀಲ್ಸ್ ಮಾಡಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತು ಮಾಡಿ ಆಸ್ಪತ್ರೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಕಿಮ್ಸ್ ಆಸ್ಪತ್ರೆಯ ನರ್ಸ್ ಗಳನ್ನು ಗುರಿಯಾಗಿಸಿಕೊಂಡು ಚಿತ್ರದ ಹಾಡಿಗೆ ರೀಲ್ಸ್ ಮಾಡುವ ಮೂಲಕ ನರ್ಸ್ ಗಳಿಗೆ ಅಪಮಾನಮಾಡಲಾಗಿದೆ. ರೀಲ್ಸ್ ಮಾಡಿದ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ನರ್ಸ್ ಅಸೋಷಿಯೇಷನ್ ಅಧ್ಯಕ್ಷೆ ಸುನೀತಾ ನಾಯ್ಕ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಅವರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಯ 11 ಮೆಡಿಕಲ್ ವಿದ್ಯಾರ್ಥಿಗಳನ್ನು ಒಂದು ವಾರಕಾಲ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಕಿಮ್ಸ್ ಪ್ರಿನ್ಸಿಪಾಲ್ ಡಾ.ಈಶ್ವರ ಹೊಸಮನಿ ಮಾಹಿತಿ ನೀಡಿದ್ದು, ಪ್ರಕರಣ ಸಂಬಂಧ 6 ಜನರ ಸಮಿತಿ ರಚಿಸಲಾಗಿದೆ. ರೀಲ್ಸ್ ಮಾಡಿದ ವಿದ್ಯಾರ್ಥಿಗಳು ಈಗಾಗಲೇ ಬಂದು ಭೇಟಿಯಾಗಿದ್ದಾರೆ. ತಪ್ಪಾಯಿತು ಎಂದು ಕ್ಷಮೆ ಕೇಳಿದ್ದಾರೆ. ಆದರೂ ವಿದ್ಯಾರ್ಥಿಗಳು ಮಾಡಿದ್ದು ಖಂಡನೀಯ. ಹೀಗಾಗಿ 11 ವೈದ್ಯಕೀಯ ವಿದ್ಯಾರ್ಥಿಗಳನ್ನು ಒಂದುವಾರ ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ ಕಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳು ನರ್ಸ್ ಗಳನ್ನು ಗುರಿಯಾಗಿಸಿಕೊಂಡು ಚಲನಚಿತ್ರದ ಹಾಡುಗಳಿಗೆ ರೀಲ್ಸ್ ಮಾಡಿ ಇನ್ ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ್ದರು. ವಿದ್ಯಾರ್ಥಿಗಳ ಹುಚ್ಚಾಟಕ್ಕೆ ಕರ್ನಾಟಕ ರಾಜ್ಯ ನರ್ಸ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ