*ಗೋಡಂಬಿ ತೋಟಕ್ಕೆ ಕರೆದೊಯ್ದು ಪತ್ನಿಯ ಕತ್ತು ಕೊಯ್ದ ಪತಿ*: *ಕೊಲೆ ಬಳಿಕ ಪೊಲೀಸರಿಗೆ ಶರಣು*

ಪ್ರಗತಿವಾಹಿನಿ ಸುದ್ದಿ: 14 ವರ್ಷಗಳ ದಾಂಪತ್ಯ, ಮೂವರು ಮಕ್ಕಳು… ಆದರೆ ಕೌಟುಂಬಿಕ ಕಲಹ ದುರಂತದಲ್ಲಿ ಅಂತ್ಯವಾಗಿದೆ. ಪತ್ನಿಯನ್ನು ಗೋಡಂಬಿ ತೋಟಕ್ಕೆ ಕರೆದೊಯ್ದ ಪತಿ, ಅಲ್ಲಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು ಇದರಿಂದ ಮೂವರ ಮಕ್ಕಳು ಅನಾಥರಾಗಿದ್ದಾರೆ.
ಮೃತ ಮಹಿಳೆಯನ್ನು ಪದ್ಮಾ ಎಂದು ಗುರುತಿಸಲಾಗಿದೆ. ಗೌರಿಬಿದನೂರು ತಾಲೂಕಿನ ನಕ್ಕಲಹಳ್ಳಿಯ ಚಂದ್ರಶೇಖರ್ ಆರೋಪಿ. ಶಿಡ್ಲಘಟ್ಟ ತಾಲೂಕಿನ ತಾತಹಳ್ಳಿಯ ಪದ್ಮಾ ಅವರನ್ನು ಸುಮಾರು 14 ವರ್ಷಗಳ ಹಿಂದೆ ಚಂದ್ರಶೇಖರ್ ವಿವಾಹವಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ.
ಗುರುವಾರ ಪದ್ಮಾ ಅವರ ತವರು ಮನೆಯ ಸಂಬಂಧಿಯೊಬ್ಬರ ತಿಥಿ ಕಾರ್ಯದಲ್ಲಿ ಪಾಲ್ಗೊಳ್ಳಲು ದಂಪತಿ ತಾತಹಳ್ಳಿಗೆ ಬಂದಿದ್ದರು. ಸಂಜೆ ವೇಳೆ ಗೋಡಂಬಿ ತೋಟ ನೋಡಿಕೊಂಡು ಬರೋಣ ಎಂದು ಪತ್ನಿಯನ್ನು ಚಂದ್ರಶೇಖರ್ ಕರೆದೊಯ್ದಿದ್ದಾನೆ. ಬಳಿಕ ತೋಟದಲ್ಲಿ ಪದ್ಮಾ ಅವರನ್ನು ಅಟ್ಟಾಡಿಸಿ ಹಲ್ಲೆ ನಡೆಸಿ, ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಾತಹಳ್ಳಿಯಲ್ಲಿ ನಡೆದಿದೆ.
ಕೊಲೆ ಬಳಿಕ ಪೊಲೀಸ್ ಠಾಣೆಗೆ ಶರಣು!
ಹತ್ಯೆ ಮಾಡಿದ ಬಳಿಕ ಚಂದ್ರಶೇಖರ್ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಅಷ್ಟೇ ಅಲ್ಲ, ಅತ್ತೆ ಮತ್ತು ಸಂಬಂಧಿಕರಿಗೆ ಕರೆ ಮಾಡಿ ಪದ್ಮಾಳನ್ನು ಕೊಲೆ ಮಾಡಿರುವುದಾಗಿ ತಿಳಿಸಿ, ಅಂತ್ಯಸಂಸ್ಕಾರ ನಡೆಸುವಂತೆ ಹೇಳಿದ್ದಾನೆ. ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಬೇರೊಬ್ಬ ಮಹಿಳೆಯೊಂದಿಗಿನ ಸಂಬಂಧವೇ ಕಾರಣ?
ಚಂದ್ರಶೇಖರ್‌ಗೆ ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರವನ್ನು ಪದ್ಮಾ ಪ್ರಶ್ನಿಸುತ್ತಿದ್ದರಿಂದ ದಂಪತಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಇದೇ ಕಾರಣಕ್ಕೆ ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಮೂವರು ಮಕ್ಕಳ ತಾಯಿಯಾಗಿದ್ದ ಪದ್ಮಾ ಕೊಲೆಯಾಗಿರುವ ಘಟನೆ ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




